ಕೈ ಸಂಸದೆಯನ್ನೂ ಬಿಡದ ಕಳ್ಳರು-ವಾಕಿಂಗ್ ಹೋಗಿದ್ದಾಗ ಚೈನ್ ಕಳವು

ನವದೆಹಲಿ: ಬೆಳಗ್ಗೆ ವಾಕಿಂಗ್ ಹೋಗಿದ್ದ ಕಾಂಗ್ರೆಸ್ (Congress) ಸಂಸದೆ ಸುಧಾ ರಾಮಕೃಷ್ಣನ್ (MP Sudha Ramakrishnan) ಅವರ ಚಿನ್ನದ ಚೈನ್‌ನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿರುವುದು ದೆಹಲಿಯಲ್ಲಿ (Delhi) ನಡೆದಿದೆ.

ತಮಿಳುನಾಡಿನ (Tamil Nadu) ಮೈಲಾಡುತುರೈನ (Mayiladuthurai) ಸಂಸದೆ ಸುಧಾ ಅವರು ಚಾಣಕ್ಯಪುರಿಯ ಪೋಲೆಂಡ್ ರಾಯಭಾರ ಕಚೇರಿಯ ಬಳಿ ಡಿಎಂಕೆ ಶಾಸಕಿ ರಾಜತಿ ಅವರ ಜೊತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಈ ಸಂಬಂಧ ಅವರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರವನ್ನು ಸಹ ಬರೆದಿದ್ದಾರೆ. ಪತ್ರದಲ್ಲಿ ಬೆಳಿಗ್ಗೆ 6:15 ರಿಂದ 6:20 ರ ಸುಮಾರಿಗೆ ಪೋಲೆಂಡ್ ರಾಯಭಾರ ಕಚೇರಿಯ ಗೇಟ್ -3 ಮತ್ತು ಗೇಟ್ -4 ರ ಬಳಿ ನಡೆದುಕೊಂಡು ಹೋಗುತ್ತಿದ್ದೆವು. ಈ ವೇಳೆ, ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸಿದ ವ್ಯಕ್ತಿ ತಮ್ಮ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.
ಅವನು ನಮ್ಮ ವಿರುದ್ಧ ದಿಕ್ಕಿನಲ್ಲಿ ನಿಧಾನವಾಗಿ ಬರುತ್ತಿದ್ದ. ಅವನು ಚೈನ್ ಕಳ್ಳ ಎಂಬ ಅನುಮಾನ ನನಗೆ ಬರಲಿಲ್ಲ. ಕಳ್ಳ ನನ್ನ ಕುತ್ತಿಗೆಯಿಂದ ಚೈನ್ ಎಳೆದಾಗ, ನನ್ನ ಕುತ್ತಿಗೆಗೆ ಗಾಯಗಳಾಗಿವೆ ಮತ್ತು ನನ್ನ ಬಟ್ಟೆ ಕೂಡ ಹರಿದಿದೆ. ನಾವು ಸಹಾಯಕ್ಕಾಗಿ ಕೂಗಿದೆವು. ನಂತರ ದೆಹಲಿ ಪೊಲೀಸರ ಗಸ್ತು ವಾಹನವನ್ನು ಗಮನಿಸಿ ಅವರಿಗೆ ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ರಾಯಭಾರ ಕಚೇರಿಗಳು ಮತ್ತು ಸರ್ಕಾರಿ ಸಂಸ್ಥೆಗಳೇ ಇರುವ ಚಾಣಕ್ಯಪುರಿಯಂತಹ ಹೆಚ್ಚಿನ ಭದ್ರತಾ ವಲಯದಲ್ಲಿ ಓರ್ವ ಸಂಸದೆಯ ಚೈನ್ ಕಳ್ಳತನ ನಡೆದುರುವುದು ಭಯಾನಕವಾದದ್ದು. ರಾಷ್ಟ್ರ ರಾಜಧಾನಿಯಲ್ಲೇ ಮಹಿಳೆ ಸುರಕ್ಷಿತವಾಗಿ ನಡೆಯಲು ಸಾಧ್ಯವಾಗದಿದ್ದರೆ, ಬೇರೆಲ್ಲಿ ಸುರಕ್ಷಿತವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನನ್ನ ಕುತ್ತಿಗೆಗೆ ಗಾಯವಾಗಿದೆ, 4 ಪವನ್‌ಗಳಿಗಿಂತ ಹೆಚ್ಚು ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದೇನೆ. ನಾನು ಬಹಳ ಆಘಾತಕ್ಕೊಳಗಾಗಿದ್ದೇನೆ. ನನಗೆ ನ್ಯಾಯ ಒದಗಿಸಿ ಎಂದು ಗೃಹಸಚಿವರಿಗೆ ಮನವಿ ಮಾಡಿದ್ದಾರೆ
