ಕೊಳದ ಅಡಿಯಲ್ಲಿ ಕಮಲದ ಕಾಂಡದ ಮೂಲಕ ಉಸಿರಾಡುತ್ತಾ 5 ಗಂಟೆ ಅಡಗಿದ್ದ ಖದೀಮ ಅಂದರ್!

ಸಿಹೋರಾ: ಚಲಿಸುತ್ತಿದ್ದ ರೈಲಿನ ಎಸಿ ಕೋಚ್ ನಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗ್ ಕದಿಯಲು ಯತ್ನಿಸಿದ ಕಳ್ಳತನ ಆರೋಪಿಯೊಬ್ಬ ಬಂಧನದಿಂದ ತಪ್ಪಿಸಿಕೊಳ್ಳಲು ಹತ್ತಿರದ ಕೊಳಕ್ಕೆ ಹಾರಿ, ಕಮಲದ ಕಾಂಡದ ಮೂಲಕ ಉಸಿರಾಡುತ್ತ ಸುಮಾರು ಐದು ಗಂಟೆಗಳ ಕಾಲ ನೀರಿನ ಅಡಿಯಲ್ಲಿ ಅಡಗಿ ಕುಳಿತ ಘಟನೆ ಎಪ್ರಿಲ್ 6ರಂದು ಇಲ್ಲಿ ನಡೆದಿದೆ. ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್), ಸ್ಥಳೀಯ ಪೊಲೀಸರು ಮತ್ತು ಮುಳುಗು ತಜ್ಞರ ಸಹಾಯದಿಂದ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ರೇವಾ-ಇಟ್ಟಾರಿ ಎಕ್ಸ್ ಪ್ರೆಸ್ ನ ಎ-2 ಎಸಿ ಕೋಚ್ ನಲ್ಲಿ ಕಳ್ಳತನ ಯತ್ನ ನಡೆದಿತ್ತು. ಮಲಗಿದ್ದ ಮಹಿಳಾ ಪ್ರಯಾಣಿಕರ ಬ್ಯಾಗ್ ಕದಿಯಲು ಆರೋಪಿ ಯತ್ನಿಸಿದಾಗ ಮಹಿಳೆ ಎಚ್ಚರಗೊಂಡಿದ್ದಾರೆ. ಈ ವೇಳೆ ರೈಲು ಸಿಹೋರಾ ನಿಲ್ದಾಣದ ಬಳಿ ನಿಧಾನಗೊಳ್ಳುತ್ತಿದ್ದಂತೆ ಆರೋಪಿ ತಕ್ಷಣ ರೈಲಿನಿಂದ ಹಾರಿ ಓಡಿದ್ದಾನೆ. ಆರ್ಪಿಎಫ್ ಸಿಬ್ಬಂದಿ ಅವನನ್ನು ಬೆನ್ನಟ್ಟಿದ್ದಾರೆ.

ತಪ್ಪಿಸಿಕೊಳ್ಳುವ ಯತ್ನದಲ್ಲಿ ಆತ ಹತ್ತಿರದಲ್ಲಿದ್ದ ಪಾಚಿಯಿಂದ ಆವೃತವಾದ ಕೊಳಕ್ಕೆ ಹಾರಿ ಕಣ್ಮರೆಯಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳಿಗೆ ನೀರಿನ ಮೇಲೆಯಲ್ಲಿ ಯಾವುದೇ ಚಲನೆಯ ಗುರುತು ಕಾಣಿಸದಿದ್ದರಿಂದ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಯಿತು.
ಆರೋಪಿ ಸಂಪೂರ್ಣವಾಗಿ ನೀರಿನ ಅಡಿಯಲ್ಲಿ ಮುಳುಗಿ, ಟೊಳ್ಳಾದ ಕಮಲದ ಕಾಂಡವನ್ನು ಉಸಿರಾಟಕ್ಕೆ ಬಳಸಿಕೊಂಡಿದ್ದಾನೆ. ದಟ್ಟ ಪಾಚಿಯ ಕೆಳಗೆ ಆತ ಸುಮಾರು ಐದು ಗಂಟೆಗಳ ಕಾಲ ಅಡಗಿ ಕುಳಿತಿದ್ದ ಎನ್ನಲಾಗಿದೆ.
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಆರ್ಪಿಎಫ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿತು, ಬಳಿಕ ಮುಳುಗು ತಜ್ಞರ ತಂಡವನ್ನು ನಿಯೋಜಿಸಿ ಶೋಧ ನಡೆಸಲಾಯಿತು. ದೀರ್ಘ ಕಾರ್ಯಾಚರಣೆಯ ನಂತರ ಕೊಳದ ಅಡಿಯಲ್ಲಿ ಅಡಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು.
ವಿಚಾರಣೆ ವೇಳೆ ಆರೋಪಿ ತನ್ನನ್ನು ಚಂಡೀಗಢದ ಬಲ್ಲು’ ಎಂದು ಪರಿಚಯಿಸಿಕೊಂಡು ತಪ್ಪು ಮಾಹಿತಿ ನೀಡಲು ಯತ್ನಿಸಿದ್ದಾನೆ. ಆದರೆ ಆರ್ಪಿಎಫ್ ಠಾಣೆಯ ಉಸ್ತುವಾರಿ ರಾಜೀವ್ ಖರಬ್ ಅನುಮಾನಗೊಂಡು ವಾಂಟೆಡ್ ಅಪರಾಧಿಯ ಚಿತ್ರವನ್ನು ಪರಿಶೀಲಿಸಿದಾಗ, ಆರೋಪಿಯನ್ನು ‘ಸನ್ನಿ’ ಎಂದು ಗುರುತಿಸಿದ್ದಾರೆ. ಈ ವೇಳೆ ಆತ ತನ್ನ ನಿಜವಾದ ಹೆಸರು ಹರ್ವಿಂದರ್ ಸಿಂಗ್ ಎಂದು ಒಪ್ಪಿಕೊಂಡಿದ್ದಾನೆ.
32 ವರ್ಷದ ಹರ್ವಿಂದರ್ ಸಿಂಗ್ ಉತ್ತರ ಪ್ರದೇಶದ ಬಿಕ್ಕೋರ್ ನಿವಾಸಿಯಾಗಿದ್ದು ದೇಶದ ವಿವಿಧ ಭಾಗಗಳಲ್ಲಿ 400ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಪುನರಾವರ್ತಿತ ಅಪರಾಧಿ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದಿಂದ ಜಮ್ಮುವರೆಗೆ ಅವನ ವಿರುದ್ಧ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ ಹರ್ ನಗರ ಪಂಚಾಯತ್ ನಲ್ಲಿ ಪಕ್ಷೇತರ ವಾರ್ಡ್ ಸದಸ್ಯನಾಗಿಯೂ ಆತ ಕಾರ್ಯನಿರ್ವಹಿಸಿದ್ದಾನೆ ಎಂದು ತಿಳಿದು ಬಂದಿದೆ.
2018ರಲ್ಲಿ ಆರೋಪಿಯ ಬಳಿಯಿಂದ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ವಜ್ರ ಹಾಗೂ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ದಾಖಲೆಗಳು ಸೂಚಿಸುತ್ತವೆ. ಅವಂತಿಕಾ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯಿಂದ ಪರವಾನಗಿ ಪಡೆದ ಪಿಸ್ತೂಲ್ ಮತ್ತು ಹಣ ಕದ್ದ ಆರೋಪವೂ ಆತನ ಮೇಲಿದೆ. ಎಸಿ ಬೋಗಿಗಳನ್ನು ಗುರಿಯಾಗಿಸಿ ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಹಾಗೂ ರೈಲು ಶೌಚಾಲಯಗಳಲ್ಲಿ ಅಡಗಿಕೊಳ್ಳುವುದು ಆತನ ಕಳ್ಳತನದ ಶೈಲಿ’.
ಆರ್ಪಿಎಫ್ ಅಧಿಕಾರಿಗಳ ಪ್ರಕಾರ, ಆರೋಪಿ ಜಬಲ್ಪುರದಿಂದ ರೈಲು ಹತ್ತಿದ್ದು ದಿಲ್ಲಿಯಿಂದ ಗೊಂಡ್ವಾನಾ ಎಕ್ಸ್ಪ್ರೆಸ್ ಮೂಲಕ ಬಂದಿದ್ದಾನೆ. ಎ-2 ಕೋಚ್ ನಲ್ಲಿ ಮಹಿಳೆಯ ಪರ್ಸ್ ಕದಿಯಲು ಯತ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಯಾಣಿಕ ಎಚ್ಚರಗೊಂಡಾಗ ಆತ ರೈಲಿನಿಂದ ಹಾರಿ ತಪ್ಪಿಸಿಕೊಂಡು ಓಡಿದ್ದು ಕೊಳಕ್ಕೆ ಹಾರಿ ಐದು ಗಂಟೆಗಳ ಕಾಲ ಅಡಗಿದ್ದಾನೆ. ಸ್ಥಳೀಯ ಪೊಲೀಸ್ ಹಾಗೂ ಮುಳುಗು ತಜ್ಞರ ಸಹಾಯದಿಂದ ಅವನನ್ನು ಬಂಧಿಸಲಾಗಿದೆ.
ವರ್ಷಗಳಿಂದ ಕಾನೂನಿನ ಕಣ್ಣಿಗೆ ತಪ್ಪಿಸಿಕೊಂಡಿದ್ದ ಈ ಮಾಸ್ಟರ್ ಕಳ್ಳ ಈ ಬಾರಿ ತನ್ನ ಕುತಂತ್ರದಿಂದಲೇ ಸಿಲುಕಿಕೊಂಡಿದ್ದಾನೆ. ಕಮಲದ ಕಾಂಡದ ಸಹಾಯದಿಂದ ಮಾಡಿದ ಸಾಹಸವೂ ಅಧಿಕಾರಿಗಳ ನಿರಂತರ ಕಾರ್ಯಾಚರಣೆಯ ಮುಂದೆ ವಿಫಲವಾಗಿದೆ.