Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವೈದ್ಯಕೀಯ ಸಹಾಯವಿಲ್ಲದ ಬಡವರ ಬದುಕು – ಕಂಪನಿಗಳ ಕ್ರೂರ ಕುತಂತ್ರ

Spread the love

ಯಾದಗಿರಿ:ರೆಡ್‌ ಝೋನ್‌ (ತೀವ್ರ ಸ್ವರೂಪದ) ಗುರುತಿಸಲಾದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ ಅರ್ಧ ಕಿ.ಮೀ. ಕೂಗಳತೆ ದೂರದಲ್ಲಿರುವ ಶೆಟ್ಟಿಹಳ್ಳಿ ಗ್ರಾಮದ ದೇವಿಂದ್ರಪ್ಪ, ಮಲ್ಲಿಕಾರ್ಜುನ, ಮರಿಲಿಂಗಪ್ಪ, ಬೀರಪ್ಪ, ನಿಂಗಪ್ಪ ಇವರೆಲ್ಲ 35- 40 ಆಜೂಬಾಜು ವಯಸ್ಸಿನವರು.

ಕೆಮಿಕಲ್‌ ಫ್ಯಾಕ್ಟರಿಗಳಿಂದ ಹೊರಸೂಸುವ ಗಾಳಿ, ತ್ಯಾಜ್ಯ-ವಾಸನೆಗಳಿಂದಾಗಿ ತಮಗೆಲ್ಲ ಒಂದಿಲ್ಲವೊಂದು ರೀತಿಯ ಕಾಯುಲೆಗಳು ಮೈಗಂಟಿಕೊಳ್ಳುತ್ತಿವೆ ಅಂತಾರೆ ಇವರೆಲ್ಲ. ದೇವಿಂದ್ರಪ್ಪ, ಆಂಜನೇಯ, ಶರಣಪ್ಪ, ಮಲ್ಲಿಕಾರ್ಜುನ್‌ ಮುಂತಾದ ಕೆಲವರಿಗೆ ಕಣ್ಣು ಮಂಜು ಮಂಜಾಗಿ ಕಾಣಿಸುತ್ತಿದೆ. ಹೆಚ್ಚಿನ ಕೆಲಸ ಮಾಡಲಾಗದು, ಹೊರಗಡೆ ತಿರುಗಾಡಬೇಕೆಂದರೆ ಮತ್ತೊಬ್ಬರ ಆಶ್ರಯಿಸಬೇಕು.

35ರ ವಯಸ್ಸಿನಲ್ಲೇ ಇವರು ವೃದ್ಧಾಪ್ಯದ ಜೀವನ ನಡೆಸುವಂತಾಗಿದೆ. ಇದೇ ಊರಿನ ಹಲವರಿಗೂ ದೃಷ್ಟಿದೋಷ, ಕೆಮ್ಮು- ದಮ್ಮು, ಕಫ, ಗಂಟಲು ಕಿರಿ ಕಿರಿ, ಉಸಿರಾಟದ ತೊಂದರೆ ಸಹಜ ಎಂಬಂತಿದೆ. ಹದಿಹರೆಯದವರಿಗೂ ಗಂಭೀರ ತರಹದ ಕಾಯುಲೆಗಳು ಕಾಣಿಸಿಕೊಳ್ಳುತ್ತಿರುವುದು ಅವರವರಲ್ಲೇ ಆತಂಕ ಮೂಡಿಸಿದೆ. “ವೀಕ್ನೆಸ್‌ ಆಗಿದ್ದಕ್ಕೆ ಡಾಕ್ಟ್ರು ಒಂದಿಷ್ಟು ಶಕ್ತಿ ಗುಳಿಗಿ ಕೊಟ್ಟಾರ. ದಿವ್ಸಾ ಮೂರು ಬಾರಿ ಆರು ತಿಂಗಳು ನುಂಗು ಅಂದಾರ. ಕಿಸೇದಾಗ ಇಟ್ಕೊಂಡಿರ್ತೀನಿ..” ಎಂದೆನ್ನುವ ಕ್ಷಯರೋಗ ನಿವಾರಣೆಗೆಂದು ಕೊಟ್ಟಿರುವ ಮಾತ್ರೆಗಳನ್ನು ತೆಗೆದು ತೋರಿಸುವ 45ರ ಹರೆಯದ ರಾಮಣ್ಣ (ಹೆಸರು ಬದಲಾಯಿಸಲಾಗಿದೆ), ಈ ಹಿಂದೆ ಆರೋಗ್ಯವಾಗಿದ್ದೆ. ಇತ್ತೀಚಿನ ಕೆಲ ವರ್ಷಗಳಿಂದ ಕೆಮ್ಮು-ದಮ್ಮು ಬಂದ್ಬಿಟ್ಟಿದೆ. ಉಸಿರಾಡಬೇಕಂದ್ರೂ ಕಷ್ಟ ಆಗ್ತದೆ..” ಎಂದು ನೋವು ತೋಡಿಕೊಂಡರು.
ಸಂಜೆಯಾದರೆ ಸಾಕು ಇಡೀ ಗ್ರಾಮವೇ ಬೆಚ್ಚಿ ಬೀಳುತ್ತದೆ. ಮನೆಗಳಲ್ಲಿನ ಕಿಟಕಿ-ಬಾಗಿಲುಗಳನ್ನೆಲ್ಲ ಮುಚ್ಚಿ, ಹೊದಿಕೆ ಹೊದ್ದರೂ ಕೆಮಿಕಲ್‌- ತ್ಯಾಜ್ಯ ವಾಸನೆ ಸುಳಿಯದೇ ಬಿಡುವುದಿಲ್ಲ. ಒಂದು ರೀತಿಯ ತಲೆಸುತ್ತುವಿಕೆ, ಗಂಟಲಲ್ಲಿ ಕಿರಿಕಿರಿ, ವಾಂತಿಯಿಂದಾಗಿ ಬದುಕು ಅಸಹನೀಯ ಎನ್ನಿಸುತ್ತದೆ ಎನ್ನವ ಬೀರಪ್ಪ, ಏನು ಮಾಡಬೇಕೆಂದು ದಿಕ್ಕು ತೋಚದೆ ಕಂಗಾಲಾಗಿಬಿಡ್ತೀವಿ ಎಂದು “ಕನ್ನಡಪ್ರಭ”ಎದುರು ಅಳಲು ತೋಡಿಕೊಂಡರು. ಕೈ-ಕಾಲು, ಮೈತುಂಬಾ ತುಂಬೆಲ್ಲ ಗುಳ್ಳೆಗಳಾಗಿವೆ, ತುರಿಕೆ ನಿರಂತರ. ಕೆಮಿಕಲ್‌ ತ್ಯಾಜ್ಯದ ನೀರು ನೇರವಾಗಿ ಹಳ್ಳಕ್ಕೆ ಸೇರುತ್ತದೆ. ಬಳಕೆ ಹಾಗೂ ಕುಡಿಯುವ ನೀರಿಗೆ ಇದು ಬೆರೆತು ಜೀವಂತ ಶವದಂತಾಗಿದ್ದೇವೆ ಎನ್ನುವ ಆಂಜನೇಯ, ಬಹುತೇಕರಿಗೆ ಇಂತಹ ಸಮಸ್ಯೆಗಳಾಗಿವೆಯಾದರೂ, ಮರ್ಯಾದೆಗಂಜಿ ಯಾರೂ ಮುಂದೆ ಬರುತ್ತಿಲ್ಲ.
ಉಳ್ಳವರು ಚಿಕಿತ್ಸೆ ಮಾಡಿಕೊಂಡರೆ, ಬಡವರು ಸದ್ದಿಲ್ಲದೆ ಸಾವಿನ ಮನೆಗೆ ತೆರಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಇಲ್ಲಿನವರು. ಕಂಪನಿಗಳು ಯಾವುದೇ ನಿಯಮಗಳ ಪಾಲಿಸ್ತಿಲ್ಲ, ಯಾರಾದರೂ ಗಣ್ಯರು ಬರುತ್ತಿದ್ದರೆ ಅಥವಾ ಪ್ರತಿಭಟನೆ, ಜನಾಕ್ರೋಶ ಕಂಡು ಬಂದಾಗ ಒಂದೆರಡು ದಿನಗಳ ಕಾಲ ಎಲ್ಲವನ್ನೂ ಮರೆಮಾಚುವ ಕಂಪನಿಗಳು, ನಂತರದಲ್ಲಿ ಮತ್ತೇ ಎಂದಿನಂತೆ ತ್ಯಾಜ್ಯ, ವಿಷಗಾಳಿ ಎಗ್ಗಿಲ್ಲದೆ ಹೊರಬಿಡ್ತಾರೆ. ನಾವು ಊರು ಬಿಟ್ಟು ಬೇರೆಡೆ ಕಾಯಂ ಆಗಿ ಇರುವಂತಹ ದುಸ್ಥಿತಿ ಬಂದಿದೆ, ಜಡ್ಡು-ಜಾಪತ್ರೆಇಲ್ಲಿನವರಿಗೆ ಸಹಜ ಎಂದು ನಿರಂಜನ ರೆಡ್ಡಿ ವಾಸ್ತವತೆಯ ಅನಾವರಣಗೊಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *