“ನಮ್ಮ ದೇಶದ ಅತಿದೊಡ್ಡ ಶತ್ರು ಯಾವ ದೇಶವೂ ಅಲ್ಲ. ನಮ್ಮ ಅತಿದೊಡ್ಡ ಶತ್ರು ಎಂದರೆ – ವಿದೇಶಿ ಅವಲಂಬನೆ

ಭಾವನಗರ: ಭಾರತದ ಅತಿದೊಡ್ಡ ಸವಾಲು ಇತರ ದೇಶಗಳ ಮೇಲಿನ ಅವಲಂಬನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೇರೆ ದೇಶಗಳ ಮೇಲಿನ ಅವಲಂಬನೆಯು ದೇಶದ ನಿಜವಾದ ಶತ್ರು. ವಿದೇಶಿ ರಾಷ್ಟ್ರಗಳ ಮೇಲಿನ ಹೆಚ್ಚಿನ ಅವಲಂಬನೆಯು ಭಾರತವನ್ನು ಹಿನ್ನಡೆಗಳಿಗೆ ಗುರಿಯಾಗಿಸುತ್ತದೆ. ಆದ್ದರಿಂದ ಈ ದುರ್ಬಲತೆಯನ್ನು ನಿವಾರಿಸುವಲ್ಲಿ ಎಲ್ಲರೂ ಒಗ್ಗೂಡಬೇಕೆಂದು ಅವರು ಒತ್ತಾಯಿಸಿದರು. ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಪ್ರಧಾನಿ ಭಾವನಗರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಸ್ವಾವಲಂಬನೆಯ ಅಗತ್ಯವನ್ನು ಪುನರುಚ್ಚರಿಸಿದರು. “ಇಂದು ಭಾರತ ‘ವಿಶ್ವಬಂಧು’ ಮನೋಭಾವದೊಂದಿಗೆ ಮುಂದುವರಿಯುತ್ತಿದೆ. ನಮಗೆ ಜಗತ್ತಿನಲ್ಲಿ ಯಾವುದೇ ಪ್ರಮುಖ ಶತ್ರುವಿಲ್ಲ. ನಮ್ಮ ದೊಡ್ಡ ಶತ್ರು ಎಂದರೆ ಇತರ ದೇಶಗಳ ಮೇಲಿನ ನಮ್ಮ ಅವಲಂಬನೆ. ಇದು ನಮ್ಮ ದೊಡ್ಡ ಶತ್ರು. ನಾವು ಒಟ್ಟಾಗಿ ಭಾರತದ ಈ ಶತ್ರುವಾದ ಅವಲಂಬನೆಯನ್ನು ಸೋಲಿಸಬೇಕು” ಎಂದು ಅವರು ಕರೆನೀಡಿದರು.
ವಿದೇಶಿ ಅವಲಂಬನೆ ಹೆಚ್ಚಾದಷ್ಟೂ ದೇಶದ ವೈಫಲ್ಯ ಹೆಚ್ಚಾಗುತ್ತದೆ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವು ಆತ್ಮನಿರ್ಭರವಾಗಬೇಕು. ನಾವು ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. 1.4 ಶತಕೋಟಿ ದೇಶವಾಸಿಗಳ ಭವಿಷ್ಯವನ್ನು ನಾವು ಇತರರಿಗೆ ಬಿಡಲು ಸಾಧ್ಯವಿಲ್ಲ” ಎಂದು ಪ್ರಧಾನಿ ಹೇಳಿದರು.
“ಭಾರತಕ್ಕೆ ಸ್ವಾವಲಂಬಿಯಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅದು ಚಿಪ್ಸ್ ಆಗಿರಲಿ ಅಥವಾ ಹಡಗುಗಳಾಗಿರಲಿ ನಾವು ಅವುಗಳನ್ನು ಭಾರತದೊಳಗೆ ತಯಾರಿಸಬೇಕು. ಭಾರತದ ಅಭಿವೃದ್ಧಿಯನ್ನು ಇತರ ದೇಶಗಳ ಮೇಲೆ ಬಿಡಲು ಸಾಧ್ಯವಿಲ್ಲ. ಹಾಗೇ ಭಾರತದ ಭವಿಷ್ಯದ ಪೀಳಿಗೆಯನ್ನು ಪಣಕ್ಕಿಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ದೇಶದ ನೂರು ದುಃಖಗಳಿಗೆ ಒಂದೇ ಒಂದು ಔಷಧಿಯೆಂದರೆ ಅದು ಸ್ವಾವಲಂಬಿ ಭಾರತ” ಎಂದು ಮೋದಿ ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ H-1B ವೀಸಾ ಅರ್ಜಿ ಶುಲ್ಕದಲ್ಲಿ ಬದಲಾವಣೆಯನ್ನು ಘೋಷಿಸಿದ ನಂತರ ಹಾಗೂ ಸುಂಕವನ್ನು ಹೆಚ್ಚಿಸಿದ ನಂತರ ಹೆಚ್ಚುತ್ತಿರುವ ಕಳವಳದ ನಡುವೆ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.