ಭಾರತೀಯ ಸಿನಿಮಾದ ಹೆಮ್ಮೆಯ ‘ದಿ ಎಪಿಕ್’ ನಾಳೆ ಬಿಡುಗಡೆ; ಬಿಡುಗಡೆಗೂ ಮುನ್ನವೇ ₹5 ಕೋಟಿಗೂ ಅಧಿಕ ಮುಂಗಡ ಬುಕಿಂಗ್!

‘ಬಾಹುಬಲಿ’ (Bahubali) ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಹೆಸರು ಬರದಿಡಬೇಕಾದ ಸಿನಿಮಾ. ‘ಬಾಹುಬಲಿ’ ಸಿನಿಮಾ ಭಾರತೀಯ ಸಿನಿಮಾದ ಅಗಾಧತೆಯನ್ನು, ಇಲ್ಲಿನ ತಂತ್ರಜ್ಞಾನ ನಿಪುಣತೆಯನ್ನು, ಸಿನಿಮಾ ಕೌಶಲ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಸಿನಿಮಾ. ‘ಬಾಹುಬಲಿ’ಗೆ ಮುಂಚೆಯೂ ಭಾರತದ ಸಿನಿಮಾಗಳು ವಿದೇಶದಲ್ಲಿ ಪ್ರದರ್ಶನ ಕಂಡಿದ್ದವು ಆದರೆ ವಿದೇಶಿಗರ ಹುಬ್ಬೇರುವಂತೆ ಮಾಡಿದ್ದು ‘ಬಾಹುಬಲಿ’. ‘ಬಾಹುಬಲಿ’ ಸಿನಿಮಾ ಭಾರತೀಯ ಚಿತ್ರರಂಗದ ಏಳ್ಗೆಗೆ ನೀಡಿದ ಕೊಡುಗೆಯೂ ಅಪಾರ. ಅದೊಂದು ಪ್ರತ್ಯೇಕ ಅಧ್ಯಾಯವೇ ಆಗುತ್ತದೆ. ಹಲವು ಕಾರಣಗಳಿಗೆ ಮಹತ್ವವಾಗಿರುವ ‘ಬಾಹುಬಲಿ’ ಸಿನಿಮಾ ಇದೀಗ ಮರು ಬಿಡುಗಡೆ ಆಗಲಿದೆ. ಮೊದಲು ಬಿಡುಗಡೆ ಆಗಿದ್ದ ಮಾಡಿದ್ದ ದಾಖಲೆಗಳನ್ನು ಪುನರಾವರ್ತಿಸಲು ಸಿನಿಮಾ ಸಿದ್ಧವಾಗಿದೆ.

‘ಬಾಹುಬಲಿ’ ಮತ್ತು ‘ಬಾಹುಬಲಿ 2’ ಸಿನಿಮಾಗಳು ಗಳಿಕೆಯಲ್ಲಿ ದಾಖಲೆಗಳನ್ನು ಬರೆದಿವೆ. ‘ಬಾಹುಬಲಿ 2’ ಸಿನಿಮಾ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಭಾರತದ ಎರಡನೇ ಸಿನಿಮಾ, ದಕ್ಷಿಣ ಭಾರತದ ಮೊದಲ ಸಿನಿಮಾ. ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ಹಣವನ್ನು ಈ ಸಿನಿಮಾ ಬಾಚಿತ್ತು. ಇದೀಗ ಈ ಎರಡೂ ಸಿನಿಮಾಗಳನ್ನು ಒಂದೇ ಸಿನಿಮಾ ಅನ್ನಾಗಿ ಮಾಡಿ ‘ಬಾಹುಬಲಿ: ದಿ ಎಪಿಕ್’ ಹೆಸರಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ನಾಳೆ (ಅಕ್ಟೋಬರ್ 31) ಬಿಡುಗಡೆ ಆಗಲಿದ್ದು, ಮೊದಲ ಬಾರಿ ಬಿಡುಗಡೆ ಆದಾಗ ಸೃಷ್ಟಿಸಿದ್ದ ದಾಖಲೆಗಳನ್ನು ಮರು ಸೃಷ್ಟಿಸಲು ಸಿನಿಮಾ ಸಜ್ಜಾದಂತಿದೆ.
ಬಾಹುಬಲಿ: ದಿ ಎಪಿಕ್’ ಸಿನಿಮಾ ಬಿಡುಗಡೆಗೆ ಮುಂಚೆ ಅಡ್ವಾನ್ಸ್ ಬುಕಿಂಗ್ ಮಜಬೂತಾಗಿ ನಡೆಯುತ್ತಿದೆ. ಬಿಡುಗಡೆಗೆ 24 ಗಂಟೆ ಇರುವಂತೆಯೇ ಸುಮಾರು 5 ಕೋಟಿಗೂ ಹೆಚ್ಚಿನ ಮೊತ್ತದ ಬುಕಿಂಗ್ ಆಗಿವೆ. ಅದರಲ್ಲೂ ಉತ್ತರ ಅಮೆರಿಕ ಒಂದರಲ್ಲೇ 2.50 ಕೋಟಿಗೂ ಹೆಚ್ಚು ಮೌಲ್ಯದ ಟಿಕೆಟ್ಗಳು ಮುಂಗಡವಾಗಿ ಬುಕಿಂಗ್ ಆಗಿವೆ. ತೆಲುಗು ರಾಜ್ಯಗಳಲ್ಲಿಯೂ ಸಹ ಮುಂಗಡ ಟಿಕೆಟ್ ಬುಕಿಂಗ್ ಜೋರಾಗಿಯೇ ಇದೆ. ಪ್ರಭಾಸ್ ಅಭಿಮಾನಿಗಳು ಚಿತ್ರಮಂದಿರಗಳನ್ನು ಸಿಂಗರಿಸಿ, ‘ಬಾಹುಬಲಿ’ಯನ್ನು ಮರಳಿ ಸ್ವಾಗತಿಸಲು ಸಜ್ಜಾಗಿದ್ದಾರೆ.
‘ಬಾಹುಬಲಿ’ ಸಿನಿಮಾ 2015 ರಲ್ಲಿ ಬಿಡುಗಡೆ ಆಗಿತ್ತು ‘ಬಾಹುಬಲಿ 2’ ಸಿನಿಮಾ 2017 ರಲ್ಲಿ ತೆರೆಗೆ ಬಂದಿತ್ತು. ಎರಡೂ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದವು. ಇದೀಗ ಈ ಎರಡೂ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ, ಕೆಲವು ಹಾಡುಗಳು, ಅನಗತ್ಯ ದೃಶ್ಯಗಳನ್ನು ತೆಗೆದು ಇದೀಗ 3:44 ನಿಮಿಷದ ಬೃಹತ್ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ರೆಡಿ ಮಾಡಲಾಗಿದ್ದು, ಸಿನಿಮಾ ನಾಳೆ (ಅಕ್ಟೋರಬರ್ 31) ಬಿಡುಗಡೆ ಆಗಲಿದೆ. ನಿರ್ದೇಶಕ ಎಸ್ಎಸ್ ರಾಜಮೌಳಿ ಹೇಳಿರುವಂತೆ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ನೋಡಲು ಹೋಗುವವರಿಗೆ ಹಲವು ಅಚ್ಚರಿಗಳು ಕಾದಿವೆಯಂತೆ.