ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಈ ಸರ್ಕಾರಿ ಶಾಲೆಯ ಸ್ಥಿತಿಯೇ ಬೇರೆ

ಗದಗ: ಸರ್ಕಾರಿ ಶಾಲೆ (government school)ಅಂದರೆ ಸಾಕು ಮೂಗು ಮುರಿಯುವ ಜನರೇ ಜಾಸ್ತಿ. ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೇ ಬೀಗ ಹಾಕುವ ಹಂತಕ್ಕೆ ತಲುಪಿವೆ. ಆದರೆ ಈ ಶಾಲೆಯಲ್ಲಿ ಭರಪೂರ ವಿದ್ಯಾರ್ಥಿಗಳ (students) ಸಂಖ್ಯೆ ಇದೆ.

ರಾಜ್ಯದಲ್ಲೇ ಅತೀ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಇಲ್ಲಿ ಕನಿಷ್ಠ ಮೂಲಸೌಕರ್ಯ ಇಲ್ಲದೇ ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಬೀಳುವ ಹಂತದಲ್ಲಿರುವ ಕಟ್ಟಡದ ಕೆಳಗೆ ಜೀವಭಯದಲ್ಲಿ ಮಕ್ಕಳು ಪಾಠ ಕೇಳುವ ದುಸ್ಥಿತಿ ಇದೆ. ಕುರಿ ಹಿಂಡಿನಂತೆ ಮಕ್ಕಳ ತುಂಬಲಾಗಿದೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಣ ಸಚಿವರೇ ಈ ಸರ್ಕಾರಿ ಶಾಲೆ ದುಸ್ತಿತಿ ನೋಡಿ ಅಂತ ಒತ್ತಾಯಿಸಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ಸರ್ಕಾರಿ ಶಾಲೆಯ ದುಸ್ಥಿತಿಗೆ ಹಿಡಿದ ಕೈಗನ್ನಡಿ. ವಿಚಿತ್ರ ಅಂದರೆ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ತರಗತಿವರೆಗೆ ಬರೊಬ್ಬರಿ 380 ವಿದ್ಯಾರ್ಥಿಗಳು ಇದ್ದಾರೆ. ಗದಗ ಜಿಲ್ಲೆಯಲ್ಲೇ ಅತೀ ಹೆಚ್ಚು ಮಕ್ಕಳ ಸಂಖ್ಯೆ ಇರುವ ಸರ್ಕಾರಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ ರಾಜ್ಯದಲ್ಲೇ ಅತೀ ಹೆಚ್ಚು ಮಕ್ಕಳಿರುವ 4ನೇ ಸ್ಥಾನದಲ್ಲಿದೆ.
ಸದ್ಯ ಇಂತಹ ಶಾಲೆ ಅವ್ಯವಸ್ಥೆ ಆಗರವಾಗಿವೆ. ಕನಿಷ್ಠ ಮೂಲಸೌಕರ್ಯವೂ ಇಲ್ಲದೇ ಬಡ ಮಕ್ಕಳ ಶಿಕ್ಷಣ ಅಧೋಗತಿಗೆ ತಲುಪಿದೆ. 380 ಮಕ್ಕಳಿಗೆ ಈ ಶಾಲೆಯಲ್ಲಿ ಕೇವಲ ನಾಲ್ಕು ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಶಿಕ್ಷಕರು ಕೂಡ ನಾಲ್ವರು ಮಾತ್ರ. ಇರುವ ನಾಲ್ಕು ಕೊಠಡಿಗಳು ಮಳೆ ಬಂದರೆ ಸೋರುತ್ತಿವೆ ಅಂತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ಮಕ್ಕಳ ಶಿಕ್ಷಣ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದೆ ಅಂತ ಕಿಡಿಕಾರಿದ್ದಾರೆ.
ಒಂದು ಕೊಠಡಿಯಲ್ಲಿ ಮೂರು ಕ್ಲಾಸ್ನ ಮಕ್ಕಳು ಕುಳಿತುಕೊಂಡು ಪಾಠ ಕೇಳಬೇಕಾಗಿದ್ದು, ಬಡ ಮಕ್ಕಳ ಶಿಕ್ಷಣದ ವ್ಯವಸ್ಥೆ ಇಷ್ಟೇನಾ ಎನ್ನುವಂತಿದೆ. ಒಂದೊಂದು ಬೆಂಚ್ ಮೇಲೆ ಮೂರು ಮಕ್ಕಳು ಕುಳಿತುಕೊಳ್ಳುತ್ತಾರೆ. ಬೆಂಚ್ ಸಾಲದ್ದಕ್ಕೆ ನೆಲದ ಮೇಲೆ ಕುಳಿತು ಮಕ್ಕಳು ಪಾಠ ಕೇಳುತ್ತಿದ್ದಾರೆ. ಶಿಕ್ಷಕರಿಗೆ ಸರಿಯಾಗಿ ನಿಂತು ಪಾಠ ಮಾಡದ ಸ್ಥಿತಿ ಇದೆ.
ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಇಲ್ಲಿನ ಅವ್ಯವಸ್ಥೆ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನೂ ಈಗಲೋ ಆಗಲೋ ಕುಸಿದು ಬೀಳುವ ಸಭಾಮಂಟಪದ ಕೆಳಗಡೆಯೇ ಮಕ್ಕಳ ಆಟ, ಪಾಠ ನಡೆಯುತ್ತೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ದೊಡ್ಡ ದುರಂತವೇ ನಡೆಯುತ್ತೆ. ಇನ್ನೂ ಶಿಥಿಲಗೊಂಡ ಎಂಟು ಕೊಠಡಿಗಳು ಡೆಮಾಲಿಷ್ ಮಾಡಲು ಮಾರ್ಕ್ ಮಾಡಲಾಗಿದೆ. ಆ ಕೆಲಸವೂ ಇನ್ನೂ ಆಗಿಲ್ಲ. ಈ ಡೇಂಜರ್ ಶಾಲೆಯಲ್ಲೇ ಮಕ್ಕಳ ಪಾಠ ನಡೆಯುತ್ತಿದೆ. ಹೀಗಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಶಾಲೆಯತ್ತ ಗಮನ ಹರಿಸಬೇಕು ಎಂದು ಎಸ್ಡಿಎಂಸಿ ಕಮಿಟಿ ಅಧ್ಯಕ್ಷ ಶರಣಪ್ಪ ಅವರು ಒತ್ತಾಯಿಸಿದ್ದಾರೆ.
ಇನ್ನೂ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ಎರಡು ಕೊಠಡಿಗಳು ವಿವೇಕ ಯೋಜನೆಯಡಿ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿ ಇನ್ನುಳಿದ ಕಾಮಗಾರಿ ಕ್ರಿಯಾ ಯೋಜನೆ ಅನುಮೋದನೆ ಹಂತದಲ್ಲಿವೆ ಅಂತ ಕಥೆ ಹೇಳುತ್ತಿದ್ದಾರೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲಿ. ಕಳೆದು ಎರಡ್ಮೂರು ವರ್ಷಗಳ ಸಮಸ್ಯೆ. ಆದರೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಬಡ ಮಕ್ಕಳ ಶಿಕ್ಷಣಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಒಟ್ಟಾರೆಯಾಗಿ ಬಾಲೆಹೊಸುರ ಗ್ರಾಮದ ಸರ್ಕಾರಿ ಶಾಲೆಯ ಅದ್ವಾನ ಸ್ತಿತಿಗೆ ಯಾವಾಗ ಮುಕ್ತಿ ಸಿಗುತ್ತದೆ ಕಾದು ನೋಡಬೇಕಿದೆ.
