ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಟಿ. ನಾಸೀರ್ ಕುತಂತ್ರ: ಯುವಕರನ್ನು ಬಳಸಿಕೊಂಡು ಲಕ್ಷಾಂತರ ರೂ. ಆಮಿಷ!

ಬೆಂಗಳೂರು: ಜೈಲಿನಲ್ಲೇ ಸಂಚು ರೂಪಿಸಿ ಕೋರ್ಟ್‌ಗೆ ಕರೆದೊಯ್ಯುವ ಮಾರ್ಗ ಮಧ್ಯೆ ಬಾಂಬ್ ಸ್ಫೋಟಿಸಿ ಬಾಂಗ್ಲಾಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದ ಎಲ್‌ಇಟಿ ಉಗ್ರ ಟಿ. ನಾಸೀರ್, ಭಯೋತ್ಪಾದಕ ಸಂಘಟನೆ ಪರ ಕೆಲಸ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದ ಯುವಕರಿಗೆ ಲಕ್ಷಾಂತರ ರೂ.ನೀಡುತ್ತಿದ್ದ ಎಂಬ ಸಂಗತಿ ತನಿಖೆ ವೇಳೆ ಬಯಲಾಗಿದೆ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಾಸೀರ್‌ನನ್ನು ಪರ ಪ್ಪನ ಅಗ್ರಹಾರ ಜೈಲಿನ ಹೈಸೆಕ್ಯೂರಿಟಿ ಜೈಲಿನಲ್ಲಿ ಇರಿಸಲಾಗಿದೆ. ಆದರೆ ಪ್ರತೀ ಶುಕ್ರವಾರ ಜೈಲಿನ ಒಂದು ಆವರಣದಲ್ಲಿ ಮುಸ್ಲಿಂ ಸಮುದಾಯದ ಸಜಾ ಬಂದಿ, ವಿಚಾ ರಣಾಧೀನ ಕೈದಿಗಳಿಗೆ ಒಟ್ಟಿಗೆ ವಿಶೇಷ ಪ್ರಾರ್ಥನೆಗೆ ಅವಕಾಶವಿದೆ.
ಅದನ್ನು ದುರುಪಯೋಗ ಪಡಿಸಿಕೊಂಡಿರುವ ನಾಸೀರ್, ಕಳ್ಳತನ, ದರೋಡೆ, ಸುಲಿಗೆಯಂತಹ ಹಣಕಾಸಿನ ಪ್ರಕರಣಗಳಲ್ಲಿ ಜೈಲು ಸೇರಿರುವ ಯುವಕರನ್ನು ಪರಿಚಯಿಸಿಕೊಂಡು ಅವರ ಹಿನ್ನೆಲೆ ಹಾಗೂ ಆರ್ಥಿಕ ಪರಿಸ್ಥಿತಿ ತಿಳಿದುಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ತನ್ನ ಬ್ಯಾರಕ್ ಬಳಿ ಕರೆಸಿಕೊಳ್ಳುತ್ತಿದ್ದ ಉಗ್ರ
ಸದ್ಯದ ಮಟ್ಟಿಗೆ ಭಾರೀ ಅಪಾಯಕಾರಿಯಾಗಿ ರುವ ನಾಸೀರ್, ಜೈಲಿನ ಅಧಿಕಾರಿ-ಸಿಬಂದಿಗೆ ಹಣದ ಆಮಿಷವೊಡ್ಡಿ, ತಾನು ಆಯ್ಕೆ ಮಾಡಿಕೊಂಡಿದ್ದ ಯುವಕರನ್ನು ತನ್ನ ಬ್ಯಾರಕ್ ಬಳಿ ಕರೆಸಿಕೊಳ್ಳುತ್ತಿದ್ದ. ಅನಂತರ ಅವರಿಗೆ ಎಲ್‌ಇಟಿ ಸಂಘಟನೆ ಬಗ್ಗೆ ಪ್ರಚೋದನೆ ನೀಡುತ್ತಿದ್ದ. ಅಲ್ಲದೆ ಜೈಲಿನಿಂದ ಬಿಡುಗಡೆ ಆಗಲು ಹಾಗೂ ಹೊರಗೆ ಹೋದ ಬಳಿಕ ಅವರಿಗೆ ತನ್ನ ಸಹಚರರ ಮೂಲಕ ಆರ್ಥಿಕವಾಗಿ ನೆರವಾಗಿದ್ದಾನೆ. ಹೀಗಾಗಿ ಸುಮಾರು ಆರೇಳು ವರ್ಷಗಳಲ್ಲಿ ಸುಮಾರು 20-30 ಮಂದಿ ಯುವಕರು ಸಂಘಟನೆ ಪರವಾಗಿ ಕೆಲಸ ಮಾಡಿದ್ದಾರೆ. ಈ ಪೈಕಿ ಕೆಲವರು ಕಾನೂನು ಮತ್ತು ಕುಟುಂಬ ಸದಸ್ಯರ ಭಯಕ್ಕೆ ಅಕ್ರಮ ಚಟುವಟಿಕೆಯಿಂದ ದೂರವಾಗಿದ್ದರೆ, ಕೆಲವರು ಈತನ ಪರವಾಗಿಯೇ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಅನೀಸಾಳಿಂದ ಹಣದ ವ್ಯವಹಾರ
ಕೆಲವು ವರ್ಷಗಳ ಹಿಂದೆ ಪ್ರಕರಣವೊಂದರ ಸಂಬಂಧ ಜೈಲು ಸೇರಿದ್ದ ಅನೀಸಾ ಫಾತೀಮಾಗೆ ನಾಸೀ ರ್‌ನ ಪರಿಚಯವಾಗಿತ್ತು. ಆಕೆ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ನಾಸೀರ್ ಪರವಾಗಿ ಕೆಲಸ ಮಾಡಿದ್ದು, ನಾಸೀರ್ ಸಹಚರರಿಂದ ಬಂದ ಲಕ್ಷಾಂತರ ರೂ.ಗಳನ್ನು ಕೆಲವರಿಗೆ ತಲುಪಿಸಿರುವ ಮಾಹಿತಿ ಇದೆ. ಹೀಗಾಗಿ ಆಕೆಯ ಹಳೇ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ತಂತ್ರ?
-ಶುಕ್ರವಾರದ ಪ್ರಾರ್ಥನೆ ಕೈಗೊಳ್ಳಲು ಜೈಲಿನಲ್ಲಿ ಪ್ರತ್ಯೇಕ ಜಾಗ
-ಲಷ್ಕರ್ ಪರ ಕೆಲಸಕ್ಕೆ ಕೈದಿಗಳನ್ನು ಬಳಸಲು ಪ್ರಾರ್ಥನೆ ಅವಕಾಶ ಬಳಕೆ
-ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರ ಜತೆ ಸ್ನೇಹ ಸಂಪಾದನೆ
-ನಾಸೀರ್ ಖೆಡ್ಡಾಕ್ಕೆ ಬೀಳುವವರಿಗೆ ಲಕ್ಷಾಂತರ ರೂ. ನೆರವು ಭರವಸೆ
-ಆರೇಳು ವರ್ಷಗಳಲ್ಲಿ 20-30 ಯುವಕರಿಂದ ಸಂಘಟನೆ ಪರ ಕೆಲಸ?
-ಜೈಲಿನಲ್ಲಿದ್ದುಕೊಂಡೇ ಲಷ್ಕರ್ ಸಂಘಟನೆ ಬಲವರ್ಧನೆ ನಡೆಸುತ್ತಿದ್ದ ಉಗ್ರ
ಇತ್ತೀಚೆಗೆ ಜೈಲಿನಲ್ಲಿ ಮತ್ತೆ ಮೊಬೈಲ್ ಪತ್ತೆ?
ಜೈಲಿನಿಂದಲೇ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಈ ಮಧ್ಯೆಯೂ ಕೆಲವು ದಿನಗಳ ಹಿಂದೆಯಷ್ಟೇ ಜೈಲಿನಲ್ಲಿ ಮತ್ತೆ 3 ಮೊಬೈಲ್‌ಗಳು ಪತ್ತೆಯಾಗಿವೆ. ಒಂದು ಆಯಂಡ್ರಾಯ್ಡ, 2 ಬೇಸಿಕ್ ಮೊಬೈಲ್‌ಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
1 ಲಕ್ಷ ರೂ. ವರೆಗೂ ನೀಡುತ್ತಿದ್ದ ಉಗ್ರ ನಾಸೀರ್
ಜೈಲಿನಲ್ಲಿದ್ದರೂ ಟಿ. ನಾಸೀರ್ ಹೊರಗಡೆ ಸಾಕಷ್ಟು ಪ್ರಭಾವಶಾಲಿ ಯಾಗಿದ್ದು, ಆತನ ಅಣತಿಯಂತೆ ಕೆಲಸ ಮಾಡುವ ಸಾಕಷ್ಟು ಮಂದಿ ನಗರದಲ್ಲಿ ಇದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ತನ್ನ ಸಂಘಟನೆ ಪರ ಕೆಲಸಕ್ಕೆ ಒಪ್ಪಿಕೊಳ್ಳುತ್ತಿದ್ದ ಯುವಕರಿಗೆ ಹಣ ಕೊಡುವುದಾಗಿ ನಂಬಿಸು ತ್ತಿದ್ದ. ಕೆಲವರು ನೀನು ಜೈಲಿನಲ್ಲಿದ್ದು ಹೇಗೆ ಹಣ ಕೊಡುತ್ತಿಯಾ? ಎಂದು ಪ್ರಶ್ನಿಸಿದರೆ, 24 ಗಂಟೆಯೊಳಗೆ ಜೈಲಿನ ಅಧಿಕಾರಿ- ಸಿಬಂದಿ ಸಹಕಾರದಿಂದಲೇ ಹಣವನ್ನು ತರಿಸಿಕೊಂಡು ಕೊಡುತ್ತಿದ್ದೆ ಎನ್ನುತ್ತಿದ್ದ. ಬಳಿಕ ಆ ಯುವಕರು ಜೈಲಿನ ಹೊರಗಡೆ ಆತನ ಪರವಾಗಿ ಅಕ್ರಮ ಚಟುವಟಿಕೆ ನಡೆಸಿದರೆ 50,000 ರೂ.ನಿಂದ 1 ಲಕ್ಷ ರೂ. ವರೆಗೂ ಹಣ ನೀಡಿರುವ ಮಾಹಿತಿ ಇದೆ.
