Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಮಗಳ ದುಡಿಮೆಯಿಂದ ಬದುಕುತ್ತಿದ್ದಾನೆ” ಎಂಬ ನಿಂದನೆ: ಟೆನಿಸ್ ಆಟಗಾರ್ತಿ ರಾಧಿಕಾ ಹತ್ಯೆಗೆ ಇದೇ ಕಾರಣವಾಯಿತೇ?

Spread the love

ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (25) ರನ್ನು ಆಕೆಯ ತಂದೆಯೇ ಗುಂಡಿಟ್ಟು ಹತ್ಯೆ ಮಾಡಿರುವ ಸುದ್ದಿ ದೇಶಾದ್ಯಂತ ತಲ್ಲಣ ಸೃಷ್ಟಿಸಿದೆ. ಈ ಘಟನೆ ಗುರುವಾರ (ಜುಲೈ 10) ಬೆಳಗ್ಗೆ ಗುರುಗ್ರಾಮದ ಸೆಕ್ಟರ್ 57ರಲ್ಲಿರುವ ರಾಧಿಕಾ ಮನೆಯಲ್ಲಿ ನಡೆದಿದ್ದು, ಗುಂಡಿಕ್ಕಿ ಕೊಂದಿದ್ದಾಗಿ ತಂದೆ ದೀಪಕ್ ಯಾದವ್ ತಪ್ಪೊಪ್ಪಿಕೊಂಡಿದ್ದಾರೆ.

ಮಗಳ ದುಡಿಮೆಯ ದುಡ್ಡಿನಿಂದ ಬದುಕುತ್ತಿದ್ದಾನೆ ಎಂದು ಸುತ್ತಮುತ್ತಲಿನ ಜನರು ಕೊಂಕು ಮಾತನಾಡುತ್ತಿದ್ದರು ಮತ್ತು ಮಗಳ ನಡತೆಯ ಬಗ್ಗೆಯೂ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದರು. ಇದರಿಂದ ಬೇಸತ್ತು ಈ ಕೃತ್ಯ ಎಸಗಿದ್ದಾಗಿ ದೀಪಕ್ ಯಾದವ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಟೆನಿಸ್ ಅಕಾಡೆಮಿಯನ್ನು ಮುಚ್ಚುವಂತೆ ರಾಧಿಕಾ ಬಳಿಕ ಹಲವು ಬಾರಿ ಕೇಳಿಕೊಂಡಿದ್ದೆ ಆದರೆ, ಆಕೆ ಮುಚ್ಚಲು ನಿರಾಕರಿಸಿದಳು. ಸಾಕಷ್ಟು ಬಾರಿ ಆಕ್ಷೇಪ ವ್ಯಕ್ತಪಡಿಸಿದರೂ ರಾಧಿಕಾ ಅಕಾಡೆಮಿಯನ್ನು ಮುಂದುವರೆಸಿದ್ದರಿಂದ ದೀಪಕ್ ತೀವ್ರ ಅಸಮಾಧಾನಗೊಂಡಿದ್ದ ಎಂದು ರಾಧಿಕಾಳ ಚಿಕ್ಕಪ್ಪ ಕುಲದೀಪ್ ಯಾದವ್ ನೀಡಿದ ದೂರಿನ ಮೇರೆಗೆ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಗುರುವಾರ ಬೆಳಗ್ಗೆ 10.30ರ ಸುಮಾರಿಗೆ ತಮ್ಮ ಮನೆಯ ಮೊದಲ ಮಹಡಿಯಲ್ಲಿ ರಾಧಿಕಾ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ದೀಪಕ್ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮೂರು ಗುಂಡುಗಳನ್ನು ಹಾರಿಸಿದ್ದರಿಂದ ರಾಧಿಕಾ ತೀವ್ರವಾಗಿ ಗಾಯಗೊಂಡಳು. ತಕ್ಷಣ ಆಕೆಯ ಚಿಕ್ಕಪ್ಪ ಮತ್ತು ಸೋದರಸಂಬಂಧಿ ಆಕೆಯನ್ನು ಏಷ್ಯಾ ಮರಿಂಗೊ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಲ್ಲಿಗೆ ತಲುಪುವಷ್ಟರಲ್ಲಿ ರಾಧಿಕಾ ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು.

ಮೃತ ರಾಧಿಕಾ ಒಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಟೆನಿಸ್ ಆಡಿದ್ದರು ಮತ್ತು ಹಲವಾರು ಟ್ರೋಫಿಗಳನ್ನು ಗೆದ್ದಿದ್ದರು. ಆದಾಗ್ಯೂ, ಪಂದ್ಯವೊಂದರಲ್ಲಿ ಭುಜದ ಗಾಯದ ನಂತರ, ಆಕೆ ಆಟವಾಡುವುದನ್ನು ನಿಲ್ಲಿಸಿ, ಟೆನಿಸ್ ಅಕಾಡೆಮಿಯನ್ನು ಪ್ರಾರಂಭಿಸಿದರು. ಅಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಮಗಳ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದೀಯಾ, ನಿನ್ನ ಮಗಳ ನಡತೆ ಸರಿ ಇಲ್ಲ ಎಂಬ ಕೆಲ ಜನರ ಹೇಳಿಕೆಯಿಂದಾದ ‘ಅವಮಾನ’ ಮತ್ತು ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ, ದೀಪಕ್ ಈ ಕೃತ್ಯ ಎಸಗಿದ್ದಾನೆಂದು ತಿಳಿದುಬಂದಿದೆ.

ಘಟನೆ ನಡೆದ ಸಮಯದಲ್ಲಿ, ತಂದೆ ದೀಪಕ್, ಮಗಳು ರಾಧಿಕಾ ಮತ್ತು ತಾಯಿ ಮಂಜು ಯಾದವ್ ಮಾತ್ರ ಮನೆಯಲ್ಲಿದ್ದರು. ಅವರ ಮಗ ಧೀರಜ್ ತನ್ನ ಕಚೇರಿಯಲ್ಲಿದ್ದ. ನೆಲಮಹಡಿಯಲ್ಲಿ ವಾಸಿಸುವ ದೀಪಕ್ ಅವರ ಸಹೋದರ ಕುಲದೀಪ್ ಮತ್ತು ಅವರ ಮಗ ಪಿಯೂಷ್ ಗುಂಡೇಟಿನ ಶಬ್ದ ಕೇಳಿ ಮೇಲಕ್ಕೆ ಓಡಿಹೋದಾಗ, ಅಡುಗೆಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಧಿಕಾ ಅವರನ್ನು ನೋಡಿದರು. ಡ್ರಾಯಿಂಗ್ ರೂಮ್ ಟೇಬಲ್ ಮೇಲೆ ರಿವಾಲ್ವರ್ ಪತ್ತೆಯಾಗಿದ್ದು, ಒಳಗೆ ಐದು ಖಾಲಿ ಶೆಲ್‌ಗಳು ಮತ್ತು ಒಂದು ಲೈವ್ ಕಾರ್ಟ್ರಿಡ್ಜ್ ಇತ್ತು.

ಕುಲದೀಪ್ ಮತ್ತು ಪಿಯೂಷ್ ತಕ್ಷಣ ರಾಧಿಕಾಳನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ಆಕೆ ಆಗಲೇ ಸಾವಿಗೀಡಾಗಿದ್ದಳು. ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿರುವುದಾಗಿ ಕುಲದೀಪ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ದೀಪಕ್‌ ಇಂತಹ ಕೃತ್ಯ ಎಸಗುತ್ತಾನೆಂದು ಕನಸು-ಮನಸ್ಸಲ್ಲೂ ಯೋಚನೆ ಮಾಡಿರಲಿಲ್ಲ. ದೀಪಕ್‌ ಬಳಿ ರಿವಾಲ್ವರ್ ಇರುವುದು ಕುಟುಂಬಕ್ಕೆ ತಿಳಿದಿತ್ತು. ಆದರೆ, ಈ ರೀತಿ ಮಾಡುತ್ತಾನೆಂದು ಭಾವಿಸಿರಲಿಲ್ಲ ಎಂದಿದ್ದಾರೆ.

ಘಟನೆ ನಡೆದ ಸಮಯದಲ್ಲಿ ರಾಧಿಕಾ ಅವರ ತಾಯಿ ಮಂಜು ಯಾದವ್, ಜ್ವರದಿಂದ ಬಳಲುತ್ತಿದ್ದರಿಂದ ತಮ್ಮ ಕೋಣೆಯಲ್ಲಿ ಮಲಗಿದ್ದರು ಮತ್ತು ಗುಂಡೇಟಿನ ಶಬ್ದ ಮಾತ್ರ ಕೇಳಿಸಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಕೃತ್ಯಕ್ಕೆ ಕಾರಣವೇನೆಂದು ತನಗೆ ತಿಳಿದಿಲ್ಲ ಎಂದು ಪೊಲೀಸರ ಬಳಿಕ ಹೇಳಿರುವ ಮಂಜು ಯಾದವ್, ತನ್ನ ಪತಿ ಮತ್ತು ಮಗಳ ನಡುವೆ ಯಾವುದೇ ಗಂಭೀರ ವಿವಾದದ ಇರಲಿಲ್ಲ. ರಾಧಿಕಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಳು ಮತ್ತು ಕುಟುಂಬಕ್ಕೆ ಎಂದಿಗೂ ಕೆಟ್ಟ ಹೆಸರು ತಂದಿಲ್ಲ ಎಂದು ಹೇಳಿದ್ದಾರೆ.

ಸ್ಥಳದಲ್ಲೇ ದೀಪಕ್ ಯಾದವ್ರನ್ನು ವಿಚಾರಣೆ ನಡೆಸಿದಾಗ ಆತ ಅಪರಾಧ ಒಪ್ಪಿಕೊಂಡಿದ್ದಾನೆ ಎಂದು ಗುರುಗ್ರಾಮ್ ಪೊಲೀಸರು ದೃಢಪಡಿಸಿದ್ದಾರೆ. ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಯಿಸಿ, ಗುಂಡು ಹಾರಿಸಲು ಬಳಸಲಾದ ರಿವಾಲ್ವರ್, ಅಪರಾಧ ಸ್ಥಳದಿಂದ ರಕ್ತದ ಮಾದರಿಗಳು ಮತ್ತು ಸ್ವ್ಯಾಬ್‌ಗಳನ್ನು ಸಾಕ್ಷ್ಯವಾಗಿ ವಶಪಡಿಸಿಕೊಳ್ಳಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ


Spread the love
Share:

administrator

Leave a Reply

Your email address will not be published. Required fields are marked *