ಮಂಡ್ಯದಲ್ಲಿ ದೇವಸ್ಥಾನಕ್ಕೆ ಕಳ್ಳರ ಎಂಟ್ರಿ: ಕಳ್ಳತನದ ಜೊತೆಗೆ ಗೋಡೆಯ ಮೇಲೆ ಅನ್ಯಧರ್ಮದ ಚಿಹ್ನೆ

ಮಳವಳ್ಳಿ ತಾಲ್ಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ಏಳೂರಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು, ಗೋಡೆಯ ಮೇಲೆ ಅನ್ಯಧರ್ಮದ ಚಿಹ್ನೆ ಬರೆಯಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಂಡ್ಯ (ಆ.07): ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು, ಏಳೂರಮ್ಮ ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿಗಳು ಕಳ್ಳತನ ಮಾಡಿ ಅನ್ಯಧರ್ಮದ ಚಿಹ್ನೆಯನ್ನು ಗೋಡೆಯ ಮೇಲೆ ಬರೆದು ಹೋಗಿದ್ದಾರೆ.
ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ರಾತ್ರಿ, ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮಾಳಿಗೆಕೊಪ್ಪಲು ಗ್ರಾಮದಲ್ಲಿರುವ ಏಳೂರಮ್ಮ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ದೇವಸ್ಥಾನದಲ್ಲಿದ್ದ ಚಿಕ್ಕ ಪುಟ್ಟ ನಗದು ಹಣ ಮತ್ತು ತಟ್ಟೆಯಲ್ಲಿ ಇಟ್ಟಿದ್ದ ಚಿಲ್ಲರೆ ಕಾಸನ್ನು ತೆಗೆದುಕೊಂಡು ಹೋಗಿದ್ದಾರೆ.
ಆದರೆ, ಕಳ್ಳತನದ ನಂತರ ದೇವಸ್ಥಾನದ ಗೋಡೆಯ ಮೇಲೆ ಅನ್ಯಧರ್ಮದ ಚಿಹ್ನೆ ಮತ್ತು ‘786’ ಎಂಬ ಸಂಖ್ಯೆಯನ್ನು ಬರೆದಿರುವುದು ಈ ಘಟನೆಯನ್ನು ಹೆಚ್ಚು ಸಂಶಯಾಸ್ಪದವಾಗಿಸಿದೆ.
ಮತ್ತೊಂದು ದೇವಸ್ಥಾನಕ್ಕೂ ಕಳ್ಳರ ಎಂಟ್ರಿ
ದುಷ್ಕರ್ಮಿಗಳು ಏಳೂರಮ್ಮ ದೇವಸ್ಥಾನಕ್ಕೂ ಮುನ್ನ ಅದೇ ಗ್ರಾಮದ ದಂಡಿಮಾರಮ್ಮ ದೇವಸ್ಥಾನಕ್ಕೂ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ದಂಡಿಮಾರಮ್ಮ ದೇವಸ್ಥಾನದಲ್ಲಿ ಯಾವುದೇ ಕಳ್ಳತನವಾಗಿಲ್ಲ ಮತ್ತು ಯಾವುದೇ ಬರಹವನ್ನು ಬರೆದಿಲ್ಲ. ಈ ಘಟನೆಗಳಿಂದಾಗಿ ದ್ವೇಷದ ಉದ್ದೇಶದಿಂದ ಈ ಕೃತ್ಯ ನಡೆದಿದೆಯೇ ಎಂಬ ಅನುಮಾನ ಮೂಡಿದೆ.
ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೇವಸ್ಥಾನದ ಗೋಡೆ ಮೇಲೆ ಬರೆದಿರುವ ಚಿಹ್ನೆ ಮತ್ತು ಸಂಖ್ಯೆಗಳ ಬಗ್ಗೆ ತೀವ್ರ ತನಿಖೆ ನಡೆಯುತ್ತಿದೆ. ಸದ್ಯ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಈ ಕೃತ್ಯದ ಹಿಂದಿರುವ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಈ ವಿಲಕ್ಷಣ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮತ್ತು ಕೋಪ ಎರಡೂ ಮನೆಮಾಡಿದೆ.
