ಗಾಳಿ ಆಂಜನೇಯ ದೇವಸ್ಥಾನ ಸೂಪರ್ದಿಗೆ – ಹೈಕೋರ್ಟ್ ಅರ್ಜಿ ವಜಾ

ಬೆಂಗಳೂರು: ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ವಹಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಕರ್ನಾಟಕ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಹೈಕೋರ್ಟ್ ವಜಾ ಮಾಡಿದೆ. 2 ವಾರದ ಬಳಿಕ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.
ದೇವಾಲಯದ ಟ್ರಸ್ಟಿಗಳು ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠದ ಅರ್ಜಿ ವಿಚಾರಣೆ ನಡೆಸಿತು.
ದೇವಾಲಯದ ಟ್ರಸ್ಟ್ ಪರ ವಕೀಲ ಪಿ.ಪ್ರಸನ್ನ ಕುಮಾರ್, ಸರ್ಕಾರವು ದೇವಾಲಯದ ಕಾರ್ಯವೈಖರಿಯ ಬಗ್ಗೆ ಸಮಗ್ರ ತನಿಖೆ ನಡೆಸದೆ ತರಾತುರಿಯಲ್ಲಿ ವರ್ತಿಸಿದೆ. ಟ್ರಸ್ಟ್ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ದೇವಾಲಯವನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವು ಅಪೂರ್ಣ ಮಾಹಿತಿಯನ್ನು ಆಧರಿಸಿದೆ ಎಂದು ವಾದಿಸಿದರು.
ಸರ್ಕಾರ ಪರ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಟ್ರಸ್ಟ್ ತನ್ನ ಹಣಕಾಸು ಮತ್ತು ಒಟ್ಟಾರೆ ಆಡಳಿತದ ಬಗ್ಗೆ ವಿವರಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪಗಳು ಟ್ರಸ್ಟ್‌ನ ಪದಾಧಿಕಾರಿಗಳ ವಿರುದ್ಧವೂ ಇದೆ. ಟ್ರಸ್ಟ್‌ನಿಂದ ಹಲವು ಬಾರಿ ಮಾಹಿತಿ ಕೇಳಲಾಗಿದೆ. ಆದರೆ ಯಾವುದೇ ಮಾಹಿತಿಯನ್ನು ಒದಗಿಸಲಾಗಿಲ್ಲ. ಕಳೆದ 19 ವರ್ಷಗಳಲ್ಲಿ ಬಂದ ಆದಾಯವನ್ನು ಖರ್ಚು ಎಂದು ತೋರಿಸಿದ್ದಾರೆ ಎಂದು ವಾದಿಸಿದರು.
ಟ್ರಸ್ಟ್ 19 ವರ್ಷಗಳಿಂದ ದೇಣಿಗೆಗಳನ್ನು ಲೂಟಿ ಮಾಡಿದೆ. ಖರ್ಚಿನ ಬಗ್ಗೆ ಒಂದೇ ಒಂದು ದಾಖಲೆಯನ್ನು ಒದಗಿಸಿಲ್ಲ. ಮುಜರಾಯಿ ಇಲಾಖೆ ಅದನ್ನು ಸುಪರ್ಧಿಗೆ ತೆಗೆದುಕೊಂಡಿರುವುದಕ್ಕೆ ದೇವಾಲಯದ ಎಲ್ಲಾ ಭಕ್ತರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರ ಪರ ವಕೀಲರು ತಿಳಿಸಿದರು.