Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

20 ವರ್ಷ ದೇವಾಲಯದ ಹಣ ಕದ್ದ ಕ್ಲಾರ್ಕ್‌ನ ಲೆಕ್ಕಾಚಾರ: ಲೋಕ ಅದಾಲತ್‌ನಲ್ಲಿ ರಾಜೀ, ಹೈಕೋರ್ಟ್‌ನಿಂದ ಮರು ವಿಚಾರಣೆಗೆ ಆದೇಶ

Spread the love

ತಿರುಮಲ: ತಿರುಪತಿ ದೇಶದ ಅತ್ಯಂತ ಶ್ರೀಮಂತ, ಅತೀ ಹೆಚ್ಚು ಆದಾಯ ತರುವ ದೇವಾಲಯಗಳಲ್ಲಿ ಒಂದು ತಿರುಪತಿ ತಿಮ್ಮಪ್ಪನಿಗೆ ದುಡ್ಡು ನೀಡಿದಷ್ಟು ದುಪ್ಪಟ್ಟು ಶ್ರೀಮಂತರಾಗುತ್ತಾರೆ ಎಂಬ ನಂಬಿಕೆ ಹಿಂದು ಸಮುದಾಯದ ಭಕ್ತರಿಗೆ ಇರುವುದರಿಂದ ಭಕ್ತರು ಸಾಕಷ್ಟು ವಸ್ತುಗಳನ್ನು ತಿಮ್ಮಪ್ಪನಿಗೆ ದಾನ ಮಾಡುತ್ತಾರೆ. ದಿನವೂ ಇಲ್ಲಿನ ದೇಗುಲಕ್ಕೆ 60 ಸಾವಿರದಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಬರುತ್ತಾರೆ. ಲಕ್ಷಾಂತರ ಮೊತ್ತದ ಹಣವನ್ನು ಇಲ್ಲಿನ ಹುಂಡಿಗಳಿಗೆ ಹಾಕಿ ತೆರಳುತ್ತಾರೆ. ಬರೀ ಹಣ ಮಾತ್ರವಲ್ಲ, ಚಿನ್ನ, ಬೆಳ್ಳಿ, ಆಭರಣಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕೂಡ ಇಲ್ಲಿ ಭಕ್ತರು ದಾನ ಮಾಡುತ್ತಾರೆ. ಆದರೆ ಇಲ್ಲಿ ಕ್ಲಾರ್ಕ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 20 ವರ್ಷಗಳಲ್ಲಿ 1000 ಕೋಟಿ ಆಸ್ತಿ ಮಾಡಿದ್ದು, ಅವರ ಆಸ್ತಿಯ ಮೂಲದ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ.

ತಮ್ಮ 20ರ ಹರೆಯದಲ್ಲಿ ಕ್ಲಾರ್ಕ್ ಆಗಿ ತಿರುಪತಿ ದೇವಾಲಯದ ಪೆದ್ದ ಜೀಯಾನಗರ ಮಠಕ್ಕೆ ಸೇರಿದ ರವಿಕುಮಾರ್ ಅವರು ಅಲ್ಲಿನ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಕೆಲಸವಾದ ಹುಂಡಿ ಹಣವನ್ನು ಲೆಕ್ಕ ಮಾಡುವ ಕ್ಲಾರ್ಕ್ ಆಗಿ ಕೆಲಸಕ್ಕೆ ಸೇರಿದ್ದು, ದಿನಕ್ಕೆ 4 ರಿಂದ 16 ಕೋಟಿಯವರೆಗೂ ಬರುತ್ತಿದ್ದ ಹಣವನ್ನು ಇಲ್ಲಿ ಲೆಕ್ಕ ಮಾಡಲಾಗುತ್ತದೆ. ಸುಮಾರು 3 ದಶಕಗಳವರೆಗೆ ಅಂದರೆ 2023ರ ಏಪ್ರಿಲ್ 29ರವರೆಗೆ ಆತ ಶ್ರದ್ಧೆಯಿಂದ ಕೆಲಸ ಮಾಡುವ ವ್ಯಕ್ತಿಯಾಗಿಯೇ ಅಲ್ಲಿ ಜನಪ್ರಿಯತೆ ಪಡೆದಿದ್ದರು. ಆದರೆ 2023ರ ಏಪ್ರಿಲ್‌ನಲ್ಲಿ ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬರು ಸಿಸಿಟಿವಿಯ ದೃಶ್ಯಾವಳಿಯನ್ನು ತಪಾಸಣೆ ಮಾಡಿದಾಗ ರವಿಕುಮಾರ್‌ ಅವರ ನಿಜವಾದ ಮುಖ ಬೆಳಕಿಗೆ ಬಂದಿತ್ತು.

108 ಕ್ಯಾಮೆರಾಗಳಿದ್ದ ದೇವಾಲಯದ ದೇಣಿಗೆಗಳನ್ನು ಹೊಂದಿರುವ 22,000 ಚದರ ಅಡಿ ವಿಸ್ತೀರ್ಣದ ಹೊಸದಾದ ಪರಕಮಣಿ ಸಂಕೀರ್ಣದಲ್ಲಿ ರವಿ ಕುಮಾರ್ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಸಿಸಿಟಿವಿಯಲ್ಲಿ ಆ ಭದ್ರತಾ ಸಿಬ್ಬಂದಿ ಗಮನಿಸಿದ್ದರು. ನಂತರ ಸಿಸಿಟಿವಿಗಳನ್ನು ಮತ್ತಷ್ಟು ಪರಿಶೀಲಿಸಿದಾಗ ಅವರು 100 ಯುಎಸ್ ಡಾಲರ್‌ನಷ್ಟು ಬಿಲ್‌ಗಳನ್ನು ಮರೆಮಾಚಿರುವುದು ಬೆಳಕಿಗೆ ಬಂದಿತ್ತು. ಬರೀ ಇಷ್ಟೇ ಅಲ್ಲಈ ಬಗ್ಗೆ ವಿಚಾರಿಸಿದಾಗ ರವಿ ಕುಮಾರ್ 20 ವರ್ಷಗಳಿಗೂ ಹೆಚ್ಚು ಕಾಲ ದೇವಸ್ಥಾನದಿಂದ ಕಳ್ಳತನ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡು ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದ್ದರು.

ಹುಂಡಿಯಿಂದ ಹಣ ಕದ್ದು ಆಸ್ತಿ ಖರೀದಿ: 7 ಆಸ್ತಿಗಳನ್ನು ತಿರುಪತಿಗೆ ದಾನ ನೀಡಿದ ದಂಪತಿ!

ಹೀಗೆ ಕದ್ದ ಹಣದಿಂದ ರವಿಕುಮಾರ್ ತಿರುಪತಿ, ಚೆನ್ನೈ ಹಾಗೂ ಆಂಧ್ರಪ್ರದೇಶ, ತೆಲಂಗಾಣದ ಹಲವು ಕಡೆ ಆಸ್ತಿಗಳನ್ನು ಖರೀದಿ ಮಾಡಿದರು. ಮೂಲತಃ 14 ಕೋಟಿ ಮೌಲ್ಯದಲ್ಲಿ ಈ ಆಸ್ತಿಗಳನ್ನು ಖರೀದಿಸಲಾಗಿತ್ತು. ಆದರೆ ತಪ್ಪೊಪ್ಪಿಗೆಯ ನಂತರವೂ ಪ್ರಕರಣ ಊಹಿಸಲಾಗದ ತಿರುವು ಪಡೆದುಕೊಂಡಿತ್ತು. ಇತ್ತ 2023ರ ಮೇ 19ರಂದು ರವಿಕುಮಾರ್ ಹಾಗೂ ಆತನ ಪತ್ನಿ ಇವುಗಳಲ್ಲಿ ಒಟ್ಟು 7 ಆಸ್ತಿಗಳನ್ನು ತಿರುಪತಿ ತಿರುಮಲ ದೇವಸ್ಥಾನದ ಟ್ರಸ್ಟ್‌ಗೆ ದಾನವಾಗಿ ನೀಡಿದ್ದರು. ಇವುಗಳಲ್ಲಿ5 ಆಸ್ತಿ ತಿರುಪತಿಯಲ್ಲಿ ಹಾಗೂ ಎರಡು ಆಸ್ತಿ ಚೆನ್ನೈನಲ್ಲಿದ್ದವು. ಈ ಆಸ್ತಿಗಳನ್ನು ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದಾಗಿ ದಾನ ಮಾಡುತ್ತಿರುವುದಾಗಿ ದಂಪತಿ ಹೇಳಿಕೊಂಡಿದ್ದರು.

ಲೋಕ ಅದಾಲತ್‌ನಲ್ಲಿ ರಾಜಿ, ಪ್ರಕರಣ ಖುಲಾಸೆ

ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಈ ದೇಣಿಗೆಯನ್ನು ಪಡೆದುಕೊಳ್ಳುವುದಕ್ಕೆ ಅನುಮೋದನೆಯನ್ನು ನೀಡಿದ್ದರು. ಆದರೆ ಮೇ 30 ರ ಹೊತ್ತಿಗೆ ತಿರುಮಲ ಪೊಲೀಸರು ರವಿಕುಮಾರ್ ದಂಪತಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು ಆದರೆ ಕೆಲವೇ ತಿಂಗಳುಗಳ ನಂತರ, ಸೆಪ್ಟೆಂಬರ್ 9 ರಂದು, ರವಿ ಕುಮಾರ್ ಮತ್ತು ದೂರುದಾರ ಟಿಟಿಡಿ ಸಹಾಯಕ ವಿಜಿಲೆನ್ಸ್ ಅಧಿಕಾರಿ ವೈ. ಸತೀಶ್ ಕುಮಾರ್ ರಾಜಿ ಮಾಡಿಕೊಳ್ಳಲು ಲೋಕ ಅದಾಲತ್ ಅನ್ನು ಸಂಪರ್ಕಿಸಿದರು. ಹೀಗಾಗಿ ಈ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು ಮತ್ತು ರವಿ ಕುಮಾರ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು ಒಂದು ರಾತ್ರಿಯೂ ಅವರು ಜೈಲಿನಲ್ಲಿ ಕಳೆಯಲಿಲ್ಲ.

ವೈಎಸ್ಆರ್ ಸರ್ಕಾರ ಬರ್ತಿದಂತೆ ಮರು ವಿಚಾರಣೆಗೆ ಪ್ರಕರಣ:

ಆದರೆ ಯಾವಾಗ 2024ರಲ್ಲಿ ಆಂಧ್ರಪ್ರದೇಶಲ್ಲಿ ವೈಎಸ್‌ಆರ್ ಸರ್ಕಾರ ಬದಲಾಗಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಟಿಡಿ ಸರ್ಕಾರ ಬಂತೋ ಎಲ್ಲವೂ ಬದಲಾಯ್ತು. ಇದೇ ಸಮಯದಲ್ಲಿ ತಿರುಪತಿ ಲಡ್ಡು ಕಲಬೆರಕೆ ಪ್ರಕರಣವೂ ಬೆಳಕಿಗೆ ಬಂದಿದ್ದು, ನಿಮಗೆ ನೆನಪಿರಬಹುದು. ದೇವಾಲಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಅಂತರಿಕ ವಿಚಾರಣೆ ನಡೆಯಿತು. ಈ ವೇಳೆ ಟಿಟಿಡಿ ಸಹಾಯಕ ವಿಜಿಲೆನ್ಸ್ ಅಧಿಕಾರಿ ವೈ. ಸತೀಶ್ ಕುಮಾರ್ ಪೊಲೀಸರ ತೀವ್ರ ಒತ್ತಡದ ಕಾರಣಕ್ಕೆ ರಾಜಿಗೆ ಒಪ್ಪಿದ್ದಾಗಿ ಹೇಳಿಕೊಂಡಿದ್ದರು.

ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ, ಆಕ್ಟೋಬರ್ 13ಕ್ಕೆ ಮುಂದಿನ ವಿಚಾರಣೆ:

ಆದರೆ ತಿರುಪತಿ ಪತ್ರಕರ್ತ ಎಂ. ಶ್ರೀನಿವಾಸ್ ರಾವ್ ಅವರು ಲೋಕ ಅದಾಲತ್ ನಿರ್ಧಾರವನ್ನು ಪ್ರಶ್ನಿಸಿ ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಹೀಗಾಗಿ ಸೆಪ್ಟೆಂಬರ್ 19, 2025 ರಂದು, ಹೈಕೋರ್ಟ್, ಲೋಕ ಅದಾಲತ್ ಆದೇಶವನ್ನು ರದ್ದುಗೊಳಿಸಿ, ಪ್ರಕರಣದ ಎಲ್ಲ ದಾಖಲೆಗಳನ್ನು ವಶಪಡಿಸಿಕೊಳ್ಳಲು ಸಿಐಡಿಗೆ ನಿರ್ದೇಶಿಸಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13 ಕ್ಕೆ ನಿಗದಿಪಡಿಸಲಾಗಿದೆ.

ಆದರೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದ ಟಿಟಿಡಿ ಅಧಿಕಾರಿಗಳು ಹಿಂದಿನ ರಾಜಿಯನ್ನು ಸಮರ್ಥಿಸಿಕೊಂಡರು. ರವಿ ಕುಮಾರ್ ಅವರ ಕುಟುಂಬ ಸಾವಿನ ಅಂಚಿನಲ್ಲಿದೆ ಮತ್ತು ಆಸ್ತಿಗಳನ್ನು ದಾನ ಮಾಡಲು ಬಯಸಿದೆ ಎಂದು ಹೇಳಿದರು. ಈ ಸಂದರ್ಭಗಳಲ್ಲಿ 40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡುವುದು ಸಮರ್ಥನೀಯ ಎಂದು ಟಿಟಿಡಿ ಮಾಜಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಹೇಳಿದರು.

ಆದರೆ, ಪ್ರಸ್ತುತ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ಬಿಜೆಪಿ ಮಂಡಳಿ ಸದಸ್ಯ ಜಿ. ಭಾನು ಪ್ರಕಾಶ್ ರೆಡ್ಡಿ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದರು. ಆಳವಾದ ತನಿಖೆಗಳನ್ನು ಏಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು ಮತ್ತು ರವಿ ಕುಮಾರ್ ಇನ್ನೂ ಏಳು ಹೆಚ್ಚುವರಿ ಆಸ್ತಿಗಳು ಮತ್ತು ಮರ್ಸಿಡಿಸ್ ಬೆಂಜ್ ಮತ್ತು ವೋಲ್ವೋ ಸೇರಿದಂತೆ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ ಎಂದರು. ಈ ಹಿಂದೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ, ದೇವಾಲಯದ ಆಭರಣಗಳನ್ನು ಕದ್ದು ಸಿಕ್ಕಿಬಿದ್ದವರಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು.

ತಿರುಪತಿಯ 13 ಹುಂಡಿಗಳು ಪ್ರತಿ ಎರಡು ಗಂಟೆಗಳಿಗೊಮ್ಮೆ ತುಂಬುತ್ತದೆ. ಇವುಗಳಲ್ಲಿ ನಾಣ್ಯಗಳಿಂದ ಹಿಡಿದು ವಿದೇಶಿ ಕರೆನ್ಸಿವರೆಗೆ ಇರುತ್ತದೆ. ಈ ದೇಣಿಗೆಗಳನ್ನು 250 ಕ್ಕೂ ಹೆಚ್ಚು ಸಿಬ್ಬಂದಿಗಳ ತಂಡವು ಸೂಕ್ಷ್ಮವಾಗಿ ಎಣಿಸಿ ಪ್ರತ್ಯೇಕಗೊಳಿಸಿ ಬ್ಯಾಂಕುಗಳಿಗೆ ವರ್ಗಾಯಿಸುತ್ತದೆ. ಆದರೂ, ಈ ವಿಸ್ತಾರವಾದ ವ್ಯವಸ್ಥೆಯ ಹೊರತಾಗಿಯೂ, ಒಬ್ಬ ವ್ಯಕ್ತಿ ದಶಕಗಳವರೆಗೆ ಇಲ್ಲಿನ ಹುಂಡಿಯಲ್ಲಿ ಕದ್ದು ಅದನ್ನು ಯಾರಿಗೂ ತಿಳಿಯದಂತೆ ಬಳಸಿಕೊಂಡಿದ್ದು ಪವಾಡವೇ ಸರಿ.


Spread the love
Share:

administrator

Leave a Reply

Your email address will not be published. Required fields are marked *