ಪ್ರೇಯಸಿಯನ್ನು ಫಾಲೋ ಮಾಡಿದ್ದಕ್ಕೆ ಕೊಲೆ: ಸಾಮಾಜಿಕ ಜಾಲತಾಣದಿಂದ ಆರಂಭವಾದ ಜಗಳಕ್ಕೆ ಬಾಲಕ ಬಲಿ!

ಗಾಜಿಯಾಬಾದ್: ಅಪ್ರಾಪ್ತ ಬಾಲಕ ಕೊ*ಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಗೆಳೆಯನಿಂದಲೇ ಬಾಲಕನ ಕೊಲೆಯಾಗಿತ್ತು. ಮೃತ ಬಾಲಕ ಸೋಶಿಯಲ್ ಮೀಡಿಯಾದಲ್ಲಿ ಗೆಳೆಯನ ಪ್ರೇಯಸಿಯನ್ನು ಫಾಲೋ ಮಾಡಿದ್ದನು. ಇದರಿಂದ ಕೋಪಗೊಂಡ ಪ್ರಿಯಕರ ಅಪ್ರಾಪ್ತ ಗೆಳೆಯನನ್ನು ಕೊಲೆ ಮಾಡಿದ್ದಾನೆ.
ಇದೀಗ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಿಯಕರ ಗೆಳೆಯನ ಪ್ರಾಣ ತೆಗೆಯಲು ಇಬ್ಬರ ಸಹಾಯ ಪಡೆದುಕೊಂಡಿದ್ದನು. ವಸೀಂ, ಸಾಹಿಲ್ ಮತ್ತು ರಾಹಿಲ್ ಬಂಧಿತ ಆರೋಪಿಗಳು. ಇದೀಗ ಮೂವರು ಜೈಲುಪಾಲಾಗಿದ್ದಾರೆ.
ಜುಲೈ 22ರ ರಾತ್ರಿ ಟ್ರೋನಿಕಾ ಸಿಟಿ ವ್ಯಾಪ್ತಿಗೆ ಬರುವ ಇಲಾಯಿಚೀಪುರ ಗ್ರಾಮದಲ್ಲಿ ಅಪ್ರಾಪ್ತ ಬಾಲಕನ ಶವ ಪತ್ತೆಯಾಗಿತ್ತು. ತನಿಖೆ ಆರಂಭಿಸಿದಾಗ ಶವ ದೆಹಲಿಯ ಖಜುರಿ ನಿವಾಸಿ ರಿಹಾನ್ (17) ಎಂಬಾತನದ್ದು ಎಂದು ಗೊತ್ತಾಯ್ತು. ಈ ಸಂಬಂಧ ಮರುದಿನ ಜುಲೈ 23ರಂದು ಪ್ರಕರಣ ದಾಖಲಾಯ್ತು ಎಂದು ಎಸಿಪಿ ಲೋನಿ ಸಿದ್ಧಾರ್ಥ್ ಗೌತಮ್ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಸೀಂ (19), ಸಾಹಿಲ್ (18) ಮತ್ತು ರಿಹಾನ್ (18) ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಸೀಂನ ಗೆಳತಿಯನ್ನು ಮೃತ ರಿಹಾನ್ ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಿದ್ದನು. ಈ ಸಂಬಂಧ ಸೋಶಿಯಲ್ ಮೀಡಯಾದಲ್ಲಿ ವಸೀಂ ಮತ್ತು ರಿಹಾನ್ ನಡುವೆ ಜಗಳವುಂಟಾಗಿತ್ತು.
ಇದರಿಂದ ಕೋಪಗೊಂಡ ವಸೀಂ ಇಬ್ಬರು ಗೆಳೆಯರೊಂದಿಗೆ ಸೇರಿಕೊಂಡು ರಿಹಾನ್ ಪ್ರಾಣ ತೆಗೆಯಲು ಪ್ಲಾನ್ ಮಾಡಿದ್ದನು. ಪ್ಲಾನ್ ಪ್ರಕಾರ ರಿಹಾನ್‌ನನ್ನು ಉಪಾಯವಾಗಿ ಕೃಷಿ ಜಮೀನಿಗೆ ಕರೆಸಿಕೊಂಡಿದ್ದಾರೆ. ನಂತರ ಮೂವರು ಚಾಕು ಇರಿದು ರಿಹಾನ್ ಪ್ರಾಣ ತೆಗೆದಿದ್ದಾರೆ. ಘಟನೆ ಬಳಿಕ ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಇದೀಗ ಪೊಲೀಸರು ಮೂವರು ಆರೋಪಿಗಳು ಬಂಧಿಸಿ, ಕೊಲೆಗೆ ಬಳಸಲಾದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.