ವಂದೇ ಭಾರತ್ ರೈಲಿನಲ್ಲಿ ತಾಂತ್ರಿಕ ದೋಷ: ನೀರು ಸೋರಿ ಪ್ರಯಾಣಿಕರಿಗೆ ಶಾಕ್

ಬೆಂಗಳೂರು:ವಂದೇ ಭಾರತ್ ರೈಲುಗಳು ಆಧುನಿಕ ರೈಲು ವ್ಯವಸ್ಥೆಗೆ ಉತ್ತಮ ಉದಾಹರಣೆಗಳು ಎಂದು ರೈಲ್ವೆ ಇಲಾಖೆ ಹೇಳುತ್ತದೆ. ಆದರೆ, ಸಂಚಾರದ ವೇಳೆಯೇ ಈ ಒಂದು ರೈಲಿನಲ್ಲಿ ಮಾಳಿಗೆ ಕೆಳಗೆ ಅಳವಡಿಸಿದ್ದ ಹವಾನಿಯಂತ್ರಿತ ಸಾಧನದ ಮೂಲಕ ನೀರು ರಭಸವಾಗಿ ಸೋರಿ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.
ವಾರಾಣಸಿ-ದೆಹಲಿ ವಂದೇ ಭಾರತ್ ರೈಲಿನಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದ್ದು ನೀರು ಸೋರಿಕೆಯಾಗಿ ಸೀಟುಗಳ ಮೇಲೆ ಬೀಳುತ್ತಿರುವ ವಿಡಿಯೊವನ್ನು ದರ್ಶಿಲ್ ಮಿಶ್ರಾ ಎನ್ನುವ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ರೈಲ್ವೆ ಇಲಾಖೆಗೆ ದೂರು ನೀಡಿದ್ದರು.

ಹೆಚ್ಚು ದುಡ್ಡು ಕೊಟ್ಟ ಅತ್ಯಂತ ಕೆಟ್ಟ ಪ್ರಯಾಣದ ಅನುಭವ ಇದಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಂಡು ದರ್ಶಿಲ್ ಮಿಶ್ರಾ ಅವರ ದೂರಿಗೆ ಪ್ರತಿಕ್ರಿಯಿಸಿರುವ ರೈಲು ಸೇವಾ ಎಕ್ಸ್ ಹ್ಯಾಂಡಲ್, ಇದು ರೈಲಿನ ಎ.ಸಿಯಲ್ಲಿನ ತಾಂತ್ರಿಕ ಕಾರಣದಿಂದ ಉಂಟಾದ ಅನಾನುಕೂಲ. ಮಳೆಯ ಕಾರಣದಿಂದ ಇದೊಂದು ಯಂತ್ರದಲ್ಲಿ ಮಾತ್ರ ದೋಷ ಕಂಡು ಬಂದಿತ್ತು. ಹೀಗಾಗಿ ನೀರು ಸೋರಿಕೆಯಾಗಿದೆ. ಉಳಿದ ಯಂತ್ರಗಳನ್ನು ಪರಿಶೀಲಿಸಿದ್ದು ಯಾವುದೇ ಲೋಪ ಇಲ್ಲ. ಲೋಪವನ್ನು ಸರಿಪಡಿಸಿ, ನಿಗಾ ವಹಿಸಲಾಗಿದೆ ಎಂದು ಹೇಳಿದೆ.
ವಂದೇ ಭಾರತ್ ರೈಲಿನಲ್ಲಿ ಆಗಾಗ ಪ್ರಯಾಣಿಕರಿಗೆ ಕಹಿ ಘಟನೆಗಳು ಅನುಭವಕ್ಕೆ ಬರುತ್ತಿರುವುದು ವರದಿಯಾಗುತ್ತಲೇ ಇವೆ.