ರಾಜ್ಯವನ್ನೇ ಬೆಚ್ಚಿಬೀಳಿಸಿದ ಟೆಕ್ಕಿ ಗಿರೀಶ್ ಕೊ*ಲೆ ಪ್ರಕರಣ- ಪತ್ನಿಗೆ ಅವಕಾಶ ನೀಡಿದ ಕೋರ್ಟ್

ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ಬಿ.ವಿ.ಗಿರೀಶ್ ಅವರನ್ನು ಗೆಳೆಯನ ಸಹಕಾರದಿಂದ ಕೊಲೆ ಮಾಡಿದ್ದಕ್ಕೆ ಶುಭಾ ಶಂಕರ್ ಹಾಗೂ ಇತರ ಮೂವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.

ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಎತ್ತಿ ಹಿಡಿದ ನ್ಯಾ. ಎಂ.ಎಂ.ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ದ್ವಿಸದಸ್ಯ ಪೀಠ ಅಪರಾಧಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿದೆ.
ಶುಭಾ ತನ್ನ ಕಾಲೇಜು ಗೆಳೆಯ ಮತ್ತು ಇತರ ಇಬ್ಬರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು. ಅಪರಾಧಕ್ಕೆ ಕಾರಣವಾದ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದ ಕುಸಿತದ ಬಗ್ಗೆ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿತು.
ಯುವತಿಯ ಮೇಲೆ ಹೇರಲಾದ ಬಲವಂತದ ವಿವಾಹವೇ ಅಪರಾಧಕ್ಕೆ ಕಾರಣ ಎಂಬುದನ್ನು ಅಭಿಪ್ರಾಯಪಟ್ಟ ಕೋರ್ಟ್ ಬಂಧನ ಮತ್ತು ಜೀವಾವಧಿ ಶಿಕ್ಷೆ ವಿಧಿಸುವುದಕ್ಕೆ ತಡೆ ನೀಡಿದೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯಪಾಲರ ಮುಂದೆ ಕ್ಷಮಾದಾನ ಸಲ್ಲಿಸಲು ಅಪರಾಧಿಗಳಿಗೆ 8 ವಾರಗಳ ಅವಕಾಶ ನೀಡಿದೆ.
ಶುಭಾ ಇತರ ಆರೋಪಿಗಳೊಂದಿಗೆ ಸೇರಿ ತನಗೆ ಮದುವೆಯಾಗಲು ಇಷ್ಟವಿಲ್ಲದ ಯುವಕನ ಹತ್ಯೆಗೆ ಸಂಚು ರೂಪಿಸಿದ್ದಾಳೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಬಲವಂತದ ಕುಟುಂಬದ ನಿರ್ಧಾರದಿಂದ ಮುಗ್ಧ ಯುವಕನ ದುರಂತ ಕೊಲೆಗೆ ಕಾರಣವಾಯಿತು. ಇದು ಇತರ ಮೂವರ ಜೀವನವನ್ನು ನಾಶಮಾಡಿತು. ಕೊಲೆಗೈದವರು ಜನ್ಮತ: ಅಪರಾಧಿಗಳಲ್ಲ. ಅಪಾಯಕಾರಿ ನಿರ್ಧಾರ ಕೈಗೊಂಡಿದ್ದರಿಂದ ಘೋರ ಅಪರಾಧಕ್ಕೆ ಕಾರಣವಾಯಿತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?
2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಇಂಟೆಲ್ ಟೆಕ್ಕಿ ಬಿ.ವಿ ಗಿರೀಶ್ (27) ಕೊಲೆ ನಡೆದಿತ್ತು. ಗಿರೀಶ್ ಭಾವಿ ಪತ್ನಿ ಶುಭಾ, ಆಕೆಯ ಪ್ರಿಯತಮ ಅರುಣ್ ವರ್ಮಾ, ಸ್ನೇಹಿತರಾದ ವೆಂಕಟೇಶ್, ದಿನೇಶ್ ಕೃತ್ಯದಲ್ಲಿ ಭಾಗಿಯಾಗಿದ್ದರು. ನಿಶ್ಚಿತಾರ್ಥ ನಡೆದ ನಾಲ್ಕೇ ದಿನದಲ್ಲಿ ಗಿರೀಶ್ ಹತ್ಯೆ ನಡೆದಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಗಿರೀಶ್ ಹಾಗೂ ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ನಿಶ್ಚಿತಾರ್ಥವು 2003ರ ನವೆಂಬರ್‌ನಲ್ಲಿ ನಡೆದಿತ್ತು. ಅವರ ವಿವಾಹವು ಐದು ತಿಂಗಳಲ್ಲಿ ನಡೆಯಬೇಕಿತ್ತು. ಈ ಮದುವೆ ಶುಭಾಗೆ ಇಷ್ಟ ಇರಲಿಲ್ಲ. ಶುಭಾ ಕಾಲೇಜಿನಲ್ಲಿ ತಮ್ಮ ಜೂನಿಯರ್ ಆಗಿದ್ದ ಅರುಣ್‌ನನ್ನು ಪ್ರೀತಿಸುತ್ತಿದ್ದಳು. ಈ ಕಾರಣಕ್ಕೆ ಶುಭಾ ಮತ್ತು ಅರುಣ್ ಸಹಚರರ ಜತೆಗೂಡಿ ಕೊಲೆ ಮಾಡಿದ್ದಾರೆಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ 17 ನೇ ತ್ವರಿತ ನ್ಯಾಯಾಲಯ ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿತ್ತು. ಈ ಆದೇಶವನ್ನು ಶುಭಾ ಮತ್ತು ಇತರರು ಹೈಕೋರ್ಟ್ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
