ಟೀಮ್ ಇಂಡಿಯಾದ ಹೊಸ ಸೆನ್ಸೇಷನ್: ಆಸೀಸ್ ವಿರುದ್ಧ ವೈಭವ್ ಸೂರ್ಯವಂಶಿ ಆರ್ಭಟ; 78 ಎಸೆತಗಳಲ್ಲಿ ಭರ್ಜರಿ ಶತಕ!

Vaibhav Suryavanshi: ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಯೂತ್ ಟೆಸ್ಟ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 78 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ವೈಭವ್ ಮತ್ತೊಮ್ಮೆ ಆಸೀಸ್ ಬೌಲರ್ಗಳ ವಿರುದ್ಧ ಆರ್ಭಟಿಸಿದ್ದಾರೆ. ಅಲ್ಲದೆ ತಮ್ಮ ಕೆರಿಯರ್ ಆರಂಭದಲ್ಲೇ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

ಟೀಮ್ ಇಂಡಿಯಾದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಆರ್ಭಟ ಮುಂದುವರೆದಿದೆ. ಅದು ಕೂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ. ಅಂದರೆ ಅಂಡರ್-19 ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ವೈಭವ್ ವೈಭವೋಪೇತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.
ವೈಭವ್ ಸೂರ್ಯವಂಶಿ ತಮ್ಮ ಅಂಡರ್-19 ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಈವರೆಗೆ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಮೂರು ಪಂದ್ಯಗಳಲ್ಲಿ ವೈಭವ್ ಕಲೆಹಾಕಿರುವುದು 221 ರನ್ಗಳು. ಅಂದರೆ ಆಸೀಸ್ ಬೌಲರ್ಗಳ ವಿರುದ್ಧ 55.25 ಸರಾಸರಿಯಲ್ಲಿ ರನ್ಗಳಿಸಿದ್ದಾರೆ.
ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ ಈವರೆಗೆ 12 ಸಿಕ್ಸ್ ಹಾಗೂ 23 ಫೋರ್ಗಳನ್ನು ಸಹ ಬಾರಿಸಿದ್ದಾರೆ. ಅದು ಕೂಡ ಮೂರು ಪಂದ್ಯಗಳಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.
ಇನ್ನು ಅಂಡರ್-19 ಟೆಸ್ಟ್ನಲ್ಲಿ ವೈಭವ್ ಸೂರ್ಯವಂಶಿ ಈವರೆಗೆ 2 ಶತಕಗಳನ್ನು ಬಾರಿಸಿದ್ದಾರೆ. ಈ ಎರಡು ಸೆಂಚುರಿಗಳು ಮೂಡಿಬಂದಿರುವುದು ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ. ಒಂದು ಶತಕವು ಭಾರತದಲ್ಲಿ ಮೂಡಿಬಂದರೆ, ಮತ್ತೊಂದು ಸೆಂಚುರಿ ಸಿಡಿಸಿರುವುದು ಆಸ್ಟ್ರೇಲಿಯಾದಲ್ಲಿ. ಅಂದರೆ ಆಸ್ಟ್ರೇಲಿಯಾ ವಿರುದ್ಧ ಕೆರಿಯರ್ ಆರಂಭದಲ್ಲೇ ವೈಭವ್ ಸೂರ್ಯವಂಶಿ ಅಬ್ಬರಿಸುತ್ತಿರುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.
ಈ ಅಂಕಿ ಅಂಶಗಳು ಶುಭ ಸೂಚನೆ ಎಂದರೆ ತಪ್ಪಾಗಲಾರದು. ಏಕೆಂದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ ಕೆರಿಯರ್ ಆರಂಭದಿಂದಲೇ ಸಚಿನ್ ಆಸೀಸ್ ಬೌಲರ್ಗಳ ವಿರುದ್ಧ ಮೇಲುಗೈ ಸಾಧಿಸುತ್ತಾ ಬಂದಿದ್ದರು. ಇದೀಗ ವೈಭವ್ ಸೂರ್ಯವಂಶಿ ಕೂಡ ಅಂಡರ್-19 ಟೂರ್ನಿಗಳಲ್ಲೇ ಆಸ್ಟ್ರೇಲಿಯಾ ವಿರುದ್ಧ ಪಾರುಪತ್ಯ ಮೆರೆಯುತ್ತಿರುವುದು ಟೀಮ್ ಇಂಡಿಯಾ ಪಾಲಿಗೆ ಶುಭಸೂಚನೆ ಎನ್ನಬಹುದು.