ಸರಕಾರಿ ಶಾಲೆಯಲ್ಲಿ ಅಕ್ಷರ ಬರೆಯಲು ಓದಲು ಬರದೆ ಒದ್ದಾಡುತ್ತಿರುವ ಶಿಕ್ಷಕ

ರಾಯ್‌ಪುರ: ದೇಶದ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿದೆ. ಆದರೆ ಅಂತಹ ಪುಟ್ಟ ಪ್ರಜೆಗಳಿಗೆ ಸರಿಯಾಗಿ ಪಾಠ ಮಾಡಿ ಭವಿಷ್ಯ ರೂಪಿಸಬೇಕಾದ ಶಿಕ್ಷಕರೇ ಸರಿ ಇಲ್ಲದಿದ್ದರೆ ದೇಶದ ಮುಂದಿನ ಪ್ರಜೆಗಳ ಭವಿಷ್ಯದ ಕತೆ ಏನು? ಈಗಾಗಲೇ ಸರ್ಕಾರಿ ಶಾಲೆ ಎಂದರೆ ಬಹುತೇಕ ಪೋಷಕರು ಮೂಗು ಮುರಿಯುತ್ತಿದ್ದಾರೆ.

ಆರ್ಥಿಕವಾಗಿ ಬಹಳ ಕಷ್ಟದಲ್ಲಿರುವವರಷ್ಟೇ ಈಗ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಓದಿಸುತ್ತಿದ್ದರೆ, ಹೀಗಿರುವಾಗ ಸರ್ಕಾರಿ ಶಾಲೆಯ ಶಿಕ್ಷಕನೋರ್ವನ ಪಾಠದ ವೀಡಿಯೋ ಬಾರಿ ವೈರಲ್ ಆಗಿದೆ. ಇಂಗ್ಲೀಷನ್ನು ಸರಿಯಾಗಿ ಓದುವುದಕ್ಕೂ ಬರೆಯುವುದಕ್ಕೂ ಬಾರದ ಆ ಶಿಕ್ಷಕ ಮಕ್ಕಳಿಗೆ ಇನ್ನೆಂಥಾ ಪಾಠ ಮಾಡಬಹು ಎಂದು ವೀಡಿಯೋ ನೋಡಿದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
11ನ್ನು ಇಂಗ್ಲೀಷ್ ಅಕ್ಷರದಲ್ಲಿ ಬರೆಯಲು ಬಾರದ ಇಂಗ್ಲೀಷ್ ಶಿಕ್ಷಕ:
ಅಂದಹಾಗೆ ಈ ಘಟನೆ ನಡೆದಿರುವುದು ಛತ್ತೀಸ್‌ಗಢದ ಬಲರಾಂಪುರದ ಸರ್ಕಾರಿ ಶಾಲೆಯಲ್ಲಿ. ಕಳೆದ ಐದು ವರ್ಷಗಳಿಂದ ಶಾಲೆಯಲ್ಲಿ ಪಾಠ ಮಾಡುತ್ತಿರುವ ಆ ಶಿಕ್ಷಕನಿಗೆ ಶಾಲೆಯ ಬೋರ್ಡ್‌ನಲ್ಲಿ ಬರೆದಿರುವ ಮೂಲ ಇಂಗ್ಲಿಷ್ ಪದಗಳನ್ನು ಸರಿಯಾಗಿ ಓದುವುದಕ್ಕಾಗಲಿ ಅಥವಾ ಬರೆಯುವುದಕ್ಕಾಗಲಿ ಬರುತ್ತಿಲ್ಲ. ಇಂತಹ ಸರಿಯಾದ ಜ್ಞಾನವಿಲ್ಲದ ಶಿಕ್ಷಕ ಸರ್ಕಾರಿ ಶಾಲೆಯಲ್ಲಿ ಹೇಗೆ ಇಂಗ್ಲಿಷ್ ಶಿಕ್ಷಕರಾದರು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
11 ಹಾಗೂ 19ನ್ನು ಇಂಗ್ಲೀಷ್‌ನಲ್ಲಿ ಉಚ್ಚರಿಸಲು ತಿಳಿಯದು:
ವೈರಲ್ ಆದ ವೀಡಿಯೋದಲ್ಲಿ ಜನರ ಗುಂಪೊಂದು ಶಿಕ್ಷಕ ಎಂದು ಹೇಳಿಕೊಳ್ಳುವ ವ್ಯಕ್ತಿಗೆ ಬೋರ್ಡ್ ಮೇಲೆ ಕೆಲವು ಪದಗಳನ್ನು ಬರೆಯಲು ಒತ್ತಾಯಿಸಿದ್ದಾರೆ. ಅಲ್ಲದೇ ಅವುಗಳನ್ನು ಓದಿಸಲು ಪ್ರಯತ್ನಿಸುತ್ತಿದ್ದಾರೆ. ಮೊದಲಿಗೆ. ಶಿಕ್ಷಕರಿಗೆ ಬೋರ್ಡ್ ಮೇಲೆ 11 ಮತ್ತು 19 ಸಂಖ್ಯೆಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲು ಜನ ಕೇಳಿದ್ದಾರೆ. ಆದರೆ ಈ ಎರಡೂ ಸಂಖ್ಯೆಗಳನ್ನು ಇಂಗ್ಲೀಷ್‌ನಲ್ಲಿ ಬರೆಯುವುದಕ್ಕೆ ಅವರಿಗೆ ಸರಿಯಾದ ಸ್ಪೆಲ್ಲಿಂಗ್ ಅಂದರೆ ಕಾಗುಣಿತವೇ ತಿಳಿದಿಲ್ಲ. ಜೊತೆಗೆ ಅವುಗಳನ್ನು ಹೇಗೆ ಉಚ್ಚರಿಸಬೇಕು ಎಂಬುದೇ ಗೊತ್ತಿಲ್ಲ. ಮಾತ್ರವಲ್ಲದೆ ಅವುಗಳನ್ನು ಹೇಗೆ ಉಚ್ಚರಿಸಬೇಕೆಂದು ಸಹ ತಿಳಿದಿರಲಿಲ್ಲ. ಅವರು ಹನ್ನೊಂದನ್ನು ‘ಇವೆನೆ’ ಮತ್ತು ಹತ್ತೊಂಬತ್ತನ್ನು ‘ನಿನಿಟಿನ್’ ಎಂದು ಉಚ್ಚರಿಸಿದ್ದಾರೆ. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆದ ನಂತರ, ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟದ ಬಗ್ಗೆ ವ್ಯಾಪಕ ಕಳವಳಗಳು ವ್ಯಕ್ತವಾಗಿವೆ.
ಮಕ್ಕಳ ಕತೆ ಏನು? ನೆಟ್ಟಿಗರ ಕಳವಳ
ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು @white_knighttt ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಛತ್ತೀಸ್‌ಗಢದ ಬಾಲರಾಂಪುರದ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಇಂಗ್ಲೀಷ್‌ನ ಮೂಲಭೂತವಾದ ಅಂಕಿಗಳನ್ನು ಕೂಡ ಇಂಗ್ಲೀಷ್‌ನಲ್ಲಿ ಬರೆಯುವುದಕ್ಕೆ ಓದುವುದಕ್ಕೆ ಬರುತ್ತಿಲ್ಲ. ಹಾಗೂ ಅವರು ನಮ್ಮ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಬದುಕಿನಲ್ಲಿ ಸರಿದಾರಿಯಲ್ಲಿ ಸಾಗಬೇಕಾದರೆ ಗುರಿಯ ಜೊತೆ ಸರಿಯಾದ ಗುರು ಕೂಡ ತುಂಬಾ ಅಗತ್ಯವಾಗಿ ಇರಬೇಕು. ಗುರಿ ಇದ್ದು, ದಾರಿ ತೋರುವ ಗುರು ಇಲ್ಲದೇ ಹೋದರೆ ಗುರಿ ಸೇರುವುದು ಬಹಳ ಕಷ್ಟ. ಹೀಗಿರುವಾಗ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ಸರಿಮಾರ್ಗದಲ್ಲಿ ನಡೆಸಬೇಕಾದ ಗುರುವೇ ಇಲ್ಲಿ ತಪ್ಪು ತಪ್ಪಾಗಿ ಪಾಠ ಹೇಳಿ ಮಕ್ಕಳ ದಾರಿ ತಪ್ಪಿಸಿದರೆ ಈ ಮಕ್ಕಳ ಮುಂದಿನ ಭವಿಷ್ಯವನ್ನು ರಕ್ಷಿಸುವುದಾದರು ಯಾರು?
