ಬೈಕ್ ಅಪಘಾತದಲ್ಲಿ ಶಿಕ್ಷಕ, ಲೇಖಕ ಸಂತೋಷ್ ಕುಮಾರ್ ನಿಧನ

ಕೋಟ: ಕೋಟದ ಮಣೂರು ಇಂದ್ರಪ್ರಸ್ಥ ಹೊಟೇಲ್ ಸಮೀಪ ಆ. 8ರಂದು ಸಂಜೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ, ಲೇಖಕ ಮಣೂರು ಪಡುಕರೆ ನಿವಾಸಿ ಸಂತೋಷ್ ಕುಮಾರ್ (44) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಅವರು ತೆಕ್ಕಟ್ಟೆಯಿಂದ ಕೋಟ ಕಡೆಗೆ ಬೈಕ್ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಹಿಂದಿನಿಂದ ಲಾರಿಯೊಂದು ಢಿಕ್ಕಿಯಾಗಿ ತಲೆಗೆ ಗಂಭೀರ ಗಾಯವಾಗಿತ್ತು. ತತ್ಕ್ಷಣ ಸ್ಥಳೀಯರು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದರು.
ಅವರು ಪ್ರಸ್ತುತ ಕುಂದಾಪುರದ ಯಡಾಡಿ ಮತ್ಯಾಡಿ ಸುಜ್ಞಾನ ಎಜುಕೇಶನ್ ಟ್ರಸ್ಟ್ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಕೊಲ್ಲೂರು ಸಮೀಪದ ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಗ್ರಾಮಾಂತರ ಭಾಗದ ಶಾಲೆಯಲ್ಲಿ ಶಿಕ್ಷಣ,
ಸಾಹಿತ್ಯದ ಜತೆಗೆ ಮಕ್ಕಳ ಪಠ್ಯೇತರ ಚಟುವಟಿಕೆಗಳ ಮೂಲಕ ಹೆಸರು ಗಳಿಸಿದ್ದರು.
ಯಕ್ಷಗಾನ ಪೋಷಕ
ಮಣೂರಿನ ಇಂಡಿಕಾ ಕಲಾಬಳಗದ ಸ್ಥಾಪಕರಾಗಿದ್ದು, ಯಕ್ಷಗಾನ ಕಲಾವಿದ ಮೊಳಹಳ್ಳಿ ದಿ| ಹೆರಿಯ ನಾಯ್ಕ ಅವರ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಿ ಪ್ರತೀ ವರ್ಷ ಕಲಾವಿದರೋರ್ವರಿಗೆ ಪ್ರದಾನ ಮಾಡುತ್ತಿದ್ದರು. ಯಕ್ಷಗಾನ ಕಲಾವಿದರಾದ ಕೋಟ ಸುರೇಶ, ಮಾಧವ ನಾಗೂರು ಅಭಿನಂದನ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಸ್ಥಳೀಯ ಹಲವಾರು ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ದುಡಿದಿದ್ದರು.
ಸಾಹಿತ್ಯ ಕ್ಷೇತ್ರದಲ್ಲಿ ಸೇವೆ
ಅವರು “ಅಲೆಗಳು’ ಕಾದಂಬರಿ, “ಅಭಿನಯ’ ನಾಟಕ ಸಂಕಲನ, “ಆಶಾ ಕಿರಣ’ ಕಥಾ ಸಂಕಲನ, ಯಕ್ಷರತ್ನ, ಯಕ್ಷತ್ರಯರು ಸ್ಮರಣ ಸಂಚಿಕೆ ರಚಿಸಿದ್ದರು ಹಾಗೂ ಮೆರವಣಿಗೆ, ಹೊಂಗನಸು ಮೊದಲಾದ ಮಕ್ಕಳ ಕೃತಿಗಳಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಕರಾವಳಿ ಭಾಗದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿದ್ದರು. ಕರ್ನಾಟಕ ಸರಕಾರದ ಜಿಲ್ಲಾ ಯುವ ಸಾಹಿತಿ ಪುರಸ್ಕಾರ ಸೇರದಂತೆ ಅನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ.
ಒಂದು ತಿಂಗಳ ಪುಟ್ಟ ಮಗು
ಒಂದೆರಡು ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಅವರಿಗೆ ಕೇವಲ ಒಂದು ತಿಂಗಳ ಪುಟ್ಟ ಹೆಣ್ಣು ಮಗುವಿದೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.