ಹೋಂ ವರ್ಕ್ ಮಾಡದಿದ್ದಕ್ಕೆ ವಿದ್ಯಾರ್ಥಿಗೆ ತಲೆಕೆಳಗಾಗಿ ನೇತು ಹಾಕಿ ಹಿಂಸೆ- ಶಿಕ್ಷಕಿ ವಿರುದ್ಧ ದೂರು

ಚಂಡೀಗಢ: ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅದನ್ನು ತಿದ್ದುವುದು ಶಿಕ್ಷಕರ ಕರ್ತವ್ಯ. ಆದರೆ ಹರಿಯಾಣದ ಶಾಲೆಯೊಂದರ ಶಿಕ್ಷಕಿ ವಿದ್ಯಾರ್ಥಿಯೋರ್ವ ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತು ಹಾಕಿ ಹಿಂಸೆ ನೀಡಿದ್ದಾಳೆ.

ಹರಿಯಾಣದ ಪಾಣಿಪತ್‌ನ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಹೋಂ ವರ್ಕ್ ಮಾಡಿಲ್ಲ ಎಂದು ಶಿಕ್ಷಕಿಯೊಬ್ಬಳು ಆತನ ಕೈಕಾಲು ಕಟ್ಟಿ, ತಲೆಕೆಳಗಾಗಿಸಿ ನೇತುಹಾಕಿ, ವಿದ್ಯಾರ್ಥಿಯನ್ನ ಚೆನ್ನಾಗಿ ಥಳಿಸಿದ್ದಾಳೆ.ಆಗಸ್ಟ್ 13ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಆಡಳಿತ ಮಂಡಳಿಗೆ ಈ ವಿಷಯ ತಿಳಿದಿದ್ದೂ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಆದರೆ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ವಿಷಯ ಬಹಿರಂಗವಾಗಿದೆ.ವಿಡಿಯೋ ಆಧರಿಸಿ ಮಾಡೆಲ್ ಪೊಲೀಸ್ ಠಾಣೆಗೆ ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದಾರೆ. ದೂರು ನೀಡಿದ ಬೆನ್ನಲ್ಲೇ ಶಿಕ್ಷಕಿ ಕಡೆಯವರು ಎನ್ನಲಾದ ಕೆಲವರು ಪೋಷಕರಿಗೆ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.ಇನ್ನೂ ಅದೇ ಶಾಲೆಯಲ್ಲಿ ಇತರ ಮಕ್ಕಳನ್ನು ಥಳಿಸುತ್ತಿರುವ ಇನ್ನೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಒಬ್ಬ ಶಿಕ್ಷಕಿ ಸತತ 9 ಬಾರಿ ಮಗುವಿಗೆ ಕಪಾಳಮೋಕ್ಷ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.ಈ ವಿಡಿಯೋಗಳನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಚಾಲಕನ ಕೈಯಿಂದಲೂ ಥಳಿಸಿದ್ದಳು ಎನ್ನಲಾಗಿ ಕಾಲೇಜು ಪ್ರಾಂಶುಪಾಲರು ಹಾಗೂ ಬಸ್ ಚಾಲಕನನ್ನು ಅರೆಸ್ಟ್ ಮಾಡಲಾಗಿದೆ.
