ಟಿ20 ಕ್ರಿಕೆಟ್: 500 ವಿಕೆಟ್ ಪಡೆದ 5ನೇ ಬೌಲರ್ ಶಕೀಬ್ ಅಲ್ ಹಸನ್; ದಾಖಲೆಗಳ ಸರದಾರ!

ಟಿ20 ಕ್ರಿಕೆಟ್ ಇತಿಹಾಸದಲ್ಲಿ 500+ ವಿಕೆಟ್ ಪಡೆದಿರುವುದು ಕೇವಲ 5 ಬೌಲರ್ಗಳು ಮಾತ್ರ. ಈ ಪಟ್ಟಿಯಲ್ಲಿ ರಶೀದ್ ಖಾನ್ ಅಗ್ರಸ್ಥಾನದಲ್ಲಿದ್ದರೆ, ಇದೀಗ ಐದನೇ ಸ್ಥಾನದಲ್ಲಿ ಶಾಕಿಬ್ ಅಲ್ ಹಸನ್ ಕಾಣಿಸಿಕೊಂಡಿದ್ದಾರೆ. ಅದು ಸಹ 502 ವಿಕೆಟ್ಗಳೊಂದಿಗೆ ಎಂಬುದು ವಿಶೇಷ.

ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಂಟಿಗುವಾ ಅಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಕಣಕ್ಕಿಳಿಯುತ್ತಿರುವ ಶಾಕಿಬ್ ಅಲ್ ಹಸನ್, ಸೇಂಟ್ ಕಿಟ್ಸ್ ಅಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಪಂದ್ಯದಲ್ಲಿ 2 ಓವರ್ಗಳಲ್ಲಿ 11 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.
ಈ ಮೂರು ವಿಕೆಟ್ಗಳೊಂದಿಗೆ ಶಾಕಿಬ್ ಅಲ್ ಹಸನ್ ಟಿ20 ಕ್ರಿಕೆಟ್ನಲ್ಲಿ 500 ವಿಕೆಟ್ಗಳ ಮೈಲುಗಲ್ಲು ಮುಟ್ಟಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 500 ವಿಕೆಟ್ಗಳ ಸಾಧನೆ ಮಾಡಿದ ಬಾಂಗ್ಲಾದೇಶದ ಮೊದಲ ಬೌಲರ್ ಹಾಗೂ ವಿಶ್ವದ 5ನೇ ಆಟಗಾರ ಎನಿಸಿಕೊಂಡಿದ್ದಾರೆ.
ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ 500+ ವಿಕೆಟ್ ಪಡೆದ ವಿಶ್ವದ ಮೊದಲ ಎಡಗೈ ಬೌಲರ್ ಎಂಬ ಹೆಗ್ಗಳಿಕೆಯನ್ನು ಸಹ ಶಾಕಿಬ್ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ನಲ್ಲಿ 500+ ವಿಕೆಟ್ ಹಾಗೂ 7000 ರನ್ ಗಳಿಸಿರುವ ವಿಶ್ವದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ಕೂಡ ಬರೆದಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಈವರೆಗೆ 448 ಟಿ20 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಶಾಕಿಬ್ ಅಲ್ ಹಸನ್ 9507 ಎಸೆತಗಳನ್ನು ಎಸೆದು 502 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 419 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 7574 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 7 ಸಾವಿರ ರನ್ ಹಾಗೂ 500+ ವಿಕೆಟ್ ಕಬಳಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಅಫ್ಘಾನಿಸ್ತಾನದ ರಶೀದ್ ಖಾನ್ ಹೆಸರಿನಲ್ಲಿದೆ. 483 ಟಿ20 ಇನಿಂಗ್ಸ್ ಗಳಲ್ಲಿ ಬೌಲಿಂಗ್ ಮಾಡಿರುವ ರಶೀದ್ ಖಾನ್ ಈವರೆಗೆ 660 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಇತಿಹಾಸದಲ್ಲೇ 650+ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
