ಪ್ರೆಸ್ ಮೀಟ್ ವೇಳೆ ಸ್ವೀಡನ್ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ವೇದಿಕೆಯಿಂದ ಕುಸಿದ ಘಟನೆ”

ಸ್ಟಾಕ್‌ಹೋಮ್: ಪ್ರೆಸ್ ಮೀಟ್ ನಡೆಯುತ್ತಿದ್ದ ವೇಳೆ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ (Elisabet Lann) ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಲ್ಯಾನ್ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿದಿದೆ.

ಸುದ್ದಿಗೋಷ್ಠಿಯಲ್ಲಿ (Press Conference) 48 ವರ್ಷದ ಎಲಿಸಬೆಟ್ ಲ್ಯಾನ್, ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಪಕ್ಕದಲ್ಲಿ ನಿಂತಿದ್ದರು. ಪತ್ರಕರ್ತರು ಪ್ರಶ್ನೆ ಕೇಳುತ್ತಿರುವಾಗಲೇ ವೇದಿಕೆಯಿಂದ ಗಾಜಿನ ಪೋಡಿಯಂ ಸಮೇತ ಕುಸಿದುಬಿದ್ದಿದ್ದಾರೆ.
16 ಸೆಕೆಂಡುಗಳ ವಿಡಿಯೋ ವೈರಲ್
ಎಲಿಸಬೆಟ್ ಲ್ಯಾನ್ ನೂತನ ಆರೋಗ್ಯ ಸಚಿವೆಯಾಗಿ (Swedish New Health Minister) ಅಧಿಕಾರ ಸ್ವೀಕರಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪ್ರೆಸ್‌ಮೀಟ್ ಆಯೋಜನೆ ಮಾಡಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಅಧಿಕಾರಿಯೊಬ್ಬರ ಮಾತುಗಳನ್ನು ಆಲಿಸುತ್ತಿದ್ದರು. ಹಾಗೆಯೇ ಮುಂದಕ್ಕೆ ಬಾಗುತ್ತಲೇ ಪೋಡಿಯಂ ಸಮೇತ ನೆಲಕ್ಕೆ ಕುಸಿದು ಬಿದ್ದರು. ಈ ದೃಶ್ಯ 16 ಸೆಕೆಂಡುಗಳ ವಿಡಿಯೋನಲ್ಲಿ ಸೆರೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ವಿಡಿಯೋ ವೈರಲ್ ಆಗಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಚಿವರನ್ನ ಸಹ ಅಧಿಕಾರಿಗಳು ಹಾಗೂ ವೇದಿಕೆ ಮುಂಭಾಗದಲ್ಲಿದ್ದ ಪತ್ರಕರ್ತರು ಆಕೆಯನ್ನ ಮೇಲೆತ್ತಿ ಕೂರಿಸಿದ್ದಾರೆ. ಸ್ವಲ್ಪ ನೀರು ಕುಡಿಸಿ ವಿಶ್ರಾಂತಿ ಕೊಡಿಸಿದ್ದಾರೆ. ಲ್ಯಾನ್ ಸ್ವಲ್ಪ ಸಮಯದ ನಂತರ ಮತ್ತೆ ಸುದ್ದಿಗೋಷ್ಠಿಗೆ ಹಾಜರಾಗಿ ಅನೇಕ ವಿಷಯ ಪ್ರಸ್ತಾಪಿಸಿದ್ದಾರೆ.
ಸದ್ಯ ನೂತನ ಸಚಿವರು ಕುಸಿದುಬಿದ್ದ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ಮೇಲ್ನೋಟಕ್ಕೆ ಕಡಿಮೆ ರಕ್ತದೊತ್ತಡದಿಂದ (ಲೋ ಬಿಪಿ) ಸಂಭವಿಸಿರಬಹುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ.
