ಅಕ್ರಮ ಸಂಬಂಧದ ಶಂಕೆ: ಪತಿಯನ್ನು ಕೊಲೆ ಮಾಡಿ ‘ಬಾತ್‌ರೂಮ್‌ನಲ್ಲಿ ಬಿದ್ದರು’ ಎಂದು ಕಥೆ ಕಟ್ಟಿದ್ದ ಪತ್ನಿ ಅರೆಸ್ಟ್!

ಬೆಂಗಳೂರು: ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವ್ಯಕ್ತಿಯನ್ನು ಆತನ ಪತ್ನಿಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಸುದ್ದಗುಂಟೆಪಾಳ್ಯದಲ್ಲಿ (Suddaguntepalya) ನಡೆದಿದೆ. ಪತಿಯ ಮುಖಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ ನಂತರ ಶವಕ್ಕೆ ಸ್ನಾನ ಮಾಡಿಸಿ ಮಲಗಿಸಿದ್ದಲ್ಲದೆ, ಬಾತ್ರೂಮ್ನಲ್ಲಿ ಜಾರಿ ಬಿದ್ದು ಏಟಾಗಿ ಮೃತಪಟ್ಟಿದ್ದಾರೆಂದು ಕಥೆ ಕಟ್ಟಿದ್ದ ಶ್ರುತಿ ಎಂಬಾಕೆಯನ್ನು ಇದೀಗ ಪೊಲೀಸರು (Bengaluru Police) ಬಾಯ್ಬಿಡಿಸಿದ್ದಾರೆ.

ಅಲ್ಲದೆ, ಕೊಲೆ ರಹಸ್ಯವನ್ನೂ ಬಯಲಿಗೆಳೆದಿದ್ದಾರೆ. ಮೃತ ವ್ಯಕ್ತಿಯನ್ನು ಭಾಸ್ಕರ್ (41) ಎಂದು ಗುರುತಿಸಲಾಗಿದೆ.
ಭಾಸ್ಕರ್ ಮನೆ ಕೆಲಸದಾಕೆ ಜತೆ ಸದಾ ಸಲುಗೆಯಿಂದ ಇರುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಸಾಕಷ್ಟು ಬಾರಿ ಗಂಡ ಹೆಂಡತಿ ನಡುವೆ ಜಗಳವೂ ನಡೆದಿತ್ತು. ಎರಡು ದಿನಗಳ ಹಿಂದೆ ರಾತ್ರಿ ಇದೇ ಕಾರಣಕ್ಕೆ ಗಲಾಟೆ ಶುರುವಾಗಿತ್ತು. ಗಲಾಟೆ ವೇಳೆ ಶ್ರುತಿ ಗಂಡನ ಮುಖಕ್ಕೆ ಬಲವಾಗಿ ಹೊಡೆದಿದ್ದರು. ಪರಿಣಾಮವಾಗಿ ಭಾಸ್ಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಪೊಲೀಸರ ಬಳಿ ಕಥೆ ಕಟ್ಟಿದ್ದ ಶ್ರುತಿ
ಪತಿಯನ್ನು ಕೊಲೆ ಮಾಡಿದ ನಂತರ ಪೊಲೀಸರ ಮುಂದೆ ಶ್ರುತಿ ಕಥೆ ಕಟ್ಟಿದ್ದರು. ಗಂಡ ಕುಡಿದು ಬಂದು ಬಾತ್ ರೂಮ್ನಲ್ಲಿ ಬಿದ್ದು ಗಾಯಗೊಂಡಿದ್ದರು. ಹೀಗಾಗಿ ಅವರಿಗೆ ಸ್ನಾನ ಮಾಡಿಸಿ ಮಲಗಿಸಿದ್ದೆ. ಅವರು ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಹಿಗಾಗಿ ಸುದ್ದಗುಂಟೆ ಪಾಳ್ಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದರು.

ಅಸಲಿ ಕಾರಣ ಬಿಚ್ಚಟ್ಟ ಮರಣೋತ್ತರ ಪರೀಕ್ಷೆ
ಅಸಹಜ ಸಾವು ಪ್ರಕರಣದ ಕಾರಣ ಭಾಸ್ಕರ್ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮುಖ ಮತ್ತು ದೇಹಕ್ಕೆ ಯಾವುದೋ ವಸ್ತುವಿನಿಂದ ಹೊಡೆದಿರುವುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಶ್ರುತಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಅಸಲಿ ಸತ್ಯ ಬಹಿರಂಗವಾಗಿದೆ.
ಪತಿಯನ್ನು ಕೊಲೆ ಮಾಡಿದ ಬಳಿಕ ಕಥೆ ಕಟ್ಟುವುದಕ್ಕೆಂದೇ ಮೃತದೇಹವನ್ನು ಸ್ನಾನ ಮಾಡಿಸಿ ಮಲಗಿಸಿದ್ದ ವಿಚಾರವೂ ಬಹಿರಂಗವಾಗಿದೆ. ಇದೀಗ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
