ನಟ ಚಂದ್ರಶೇಖರ್ ಸಿದ್ಧಿ ಸಾವಿನಲ್ಲಿ ಅನುಮಾನ: ಪತ್ನಿ ವಿರುದ್ಧವೇ ದೂರು ನೀಡಿದ ತಾಯಿ

ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ಧಿ ಆತ್ಮಹ*ತ್ಯೆ ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದೆ. ಇದೀಗ ಚಂದ್ರಶೇಖರ್ ಸಿದ್ಧಿ ಸಾವಿನ ಬಗ್ಗೆ ಮಾತನ ಆಡಿದ ಅವರ ತಾಯಿ ಪುತ್ರನ ಸಾವಿನಲ್ಲಿ ನನಗೆ ಸಂಶಯವಿದೆ ಎಂದು ಆರೋಪ ಮಾಡಿದ್ದಾರೆ.

ಚಂದ್ರಶೇಖರ್ ತಾಯಿ ಲಕ್ಷ್ಮೀ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನನ್ನ ಮಗ ಚಂದ್ರಶೇಖರ್ ಹಾಗೂ ಆತನ ಪತ್ನಿಗೆ ಈ ಹಿಂದೆ ಜಗಳ ಆಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಪುತ್ರನ ಸಾವಿನಲ್ಲಿ ಸಂಶಯವಿದೆ ಎಂದು ಆರೋಪಿಸಿದ್ದಾರೆ. ಮೃತ ಚಂದ್ರಶೇಖರ್ ತಾಯಿ ಲಕ್ಷ್ಮೀ ಅವರು ಆಶಾ ಕಾರ್ಯಕರ್ತೆಯಾಗಿದ್ದಾರೆ. ಇದೀಗ ಮಗನ ಸಾವಿನ ಬಗ್ಗೆ ಅನುಮಾನವಿದ್ದು, ಆತನ ಹೆಂಡತಿ ವಿರುದ್ಧವೇ ದೂರು ನೀಡಿದ್ದಾರೆ. ಈ ಮೂಲಕ ಚಂದ್ರಶೇಖರ್ ಸಾವಿನ ಬಗ್ಗೆ ರೋಚಲ ತಿರುವು ಸಿಕ್ಕಂತಾಗಿದೆ.
ಯಲ್ಲಾಪುರ ಕಟ್ಟಿಗೆ ಗ್ರಾಮದ ಶ್ರೀಪತಿ ಕೋಟೆಮನೆ ಅವರ ಹೊಲದ ಕೆಲಸಕ್ಕೆ ಹೋಗಿದ್ದ ಹಾಸ್ಯನಟ ಚಂದ್ರಶೇಖರ್ ಸಿದ್ಧಿ ಮೊನ್ನೆ ಸಂಜೆ ವೇಳೆ ಅದೇ ಗ್ರಾಮದ ಅರಣ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದರು. ಆದರೆ, ಈತ ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಚಿಮನಳ್ಳಿ ನಿವಾಸಿ ಆಗಿದ್ದನು. ಜೀ ಕನ್ನಡ ಖಾಸಗಿ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ರಾಜ್ಯಾದ್ಯಂತ ಜನರಿಗೆ ಚಿರಪರಿಚಿತನಾಗಿದ್ದನು.
ಇನ್ನು ರಂಗಭೂಮಿ ಮತ್ತು ಕಲೆಯಲ್ಲಿ ಆಸಕ್ತಿ ಹೊಂದಿದ್ದ ಚಂದ್ರಶೇಖರ್ ಸಿದ್ಧಿ ನಿನಾಸಂನಲ್ಲಿ ನಾಟಕ ತರಬೇತಿ ಪಡೆದಿದ್ದನು. ಜೊತೆಗೆ, ಈತ ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿದ್ದನು. ಆದರೆ, ಟಿವಿಯ ರಿಯಾಲಿಟಿ ಶೋಗಳು ಹಾಗೂ ಕಿರುತೆರೆಯಲ್ಲಿ ಹೆಚ್ಚಿನ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ, ಊರಿಗೆ ವಾಪಸಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ಇದರಿಂದಾಗಿ ಕಳೆದ ಜನವರಿ ತಿಂಗಳಿಂದ ಮಾನಸಿಕವಾಗಿ ಜರ್ಜರಿತನಾಗಿದ್ದನು. ಹೀಗಾಗಿ ಪತ್ನಿ ಜತೆ ಗಲಾಟೆ ಮಾಡುತ್ತಿದ್ದನ.
ಹೆಂಡತಿಗೆ ನೀನು ನನಗೆ ಮೋಸ ಮಾಡ್ತಿದ್ದೀಯ, ಎಲ್ಲರೂ ಮೋಸ ಮಾಡ್ತಾರೆ. ನನ್ನನ್ನೇ ಟಾರ್ಗೆಟ್ ಮಾಡ್ತಾರೆ, ನಾನು ಸಾಯಬೇಕು ಅಂತಿದ್ದನು. ಹೀಗೆ ಮಾನಸಿಕವಾಗಿ ಬಳಲುತ್ತಿದ್ದ ಚಂದ್ರಶೇಖರ್‌ನನ್ನು ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಾ ಕೊಡಿಸಿದ್ದರು. ವೈದ್ಯಕೀಯ ಚಿಕಿತ್ಸೆ ಪಡೆದ ಬಳಿಕ ಪತ್ನಿ ಹಾಗೂ ಕುಟುಂಬದ ಜತೆ ಮತ್ತೆ ಚೆನ್ನಾಗಿದ್ದನು. ಹೀಗೆ ಸಂಸಾಸ ಚೆನ್ನಾಗಿ ಸಾಗುತ್ತಿದ್ದು, ಎಂದಿನಂತೆ ಜುಲೈ 31ರಂದು ಕೂಡ ಶಾಲೆಗೆ ಹೋಗಿದ್ದ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದಿದ್ದನು.
ಇದಾದ ನಂತರ ಸಂಜೆ ವೇಳೆ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ತಂಬಿಗೆಯಲ್ಲಿ ನೀರು ತೆಗೆದುಕೊಂಡು ಕಾಡಿನತ್ತ ಬಹಿರ್ದೆಸೆಗೆ ಹೋಗಿದ್ದನು. ಆಗ ತನ್ನ 3 ವರ್ಷದ ಗಂಡು ಮಗು ಜೊತೆಗೆ ‘ನಾನಿನ್ನು ವಾಪಸ್ ಬರಲ್ಲ’ ಎಂದು ಹೇಳಿ ಮನೆ ಹಿಂಬದಿಯ ಗುಡ್ಡದತ್ತ ತೆರಳಿ, ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಘಟನೆ ಸಂಬಂಧಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಪ್ರಕರಣ ಸಂಬಂಧಿಸಿ ಯಲ್ಲಾಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
