ಅಕ್ರಮ ಸಂಬಂಧ ಶಂಕಿಸಿ ಪತ್ನಿಗೆ ಚಾಕು ಇರಿದು ಕೊಲೆ

ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿ (wife) ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಗೆ ಚಾಕು ಇರಿದು ಕೊಂದ ಪ್ರಕರಣ ಉತ್ತರ ಪ್ರದೇಶದ (Uttar Pradesh) ಗೌತಮ್ ಬುದ್ಧ ನಗರ ಜಿಲ್ಲೆಯ ದಾದ್ರಿಯಲ್ಲಿ ನಡೆದಿದೆ.

ಕೊಲೆಯಾದ (Murder) ಮಹಿಳೆಯನ್ನು ಚಂಚಲ್ ಶರ್ಮಾ(28) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಸೋನು ಶರ್ಮಾ (36) ಎಂದು ಗುರುತಿಸಲಾಗಿದೆ. ಚಂಚಲ್ ಶರ್ಮಾ ಪಿಜ್ಜಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಸಹೋದ್ಯೋಗಿ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಕೆಲಸ ಬಿಡುವಂತೆ ಆತ ಒತ್ತಾಯ ಮಾಡಿದ್ದ. ಆದರೆ ಮಹಿಳೆ ಕುಟುಂಬದ ನಿರ್ವಹಣೆಗಾಗಿ ಕೆಲಸ ಬಿಡಲು ನಿರಾಕರಿಸಿದ್ದಳು.
ಇದೇ ವಿಚಾರವಾಗಿ ಸೋನು, ಪತ್ನಿ ಜೊತೆ ಭಾನುವಾರ (ಸೆ.21) ಗಲಾಟೆ ಮಾಡಿದ್ದ. ಬಳಿಕ ಮುಖವನ್ನು ಬಟ್ಟೆಯಿಂದ ಮುಚ್ಚಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಆಕೆಯ ಕಿರುಚಾಟ ಕೇಳಿ ಏಳು ವರ್ಷದ ಮಗಳು ಮತ್ತು ಐದು ವರ್ಷದ ಮಗ ಎದ್ದು ತಪ್ಪಿಸಲು ಯತ್ನಿಸಿದ್ದರು. ಆದರೆ ಅವರನ್ನು ದೂರ ತಳ್ಳಿ ಕೊಲೆ ಮಾಡಿದ್ದ.
ಕೊಲೆಗೈದ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಆರೋಪಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.