ಆಂಬ್ಯುಲೆನ್ಸ್‌ನಲ್ಲಿ ಅಚ್ಚರಿಯ ಹೆರಿಗೆ: 50ರ ಹರೆಯದ ಮಹಿಳೆ 14ನೇ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ಧಾರೆ!

ಲಕ್ನೋ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ 50 ವರ್ಷದ ಗುಡಿಯಾ ಎಂಬ ಮಹಿಳೆ ಆಂಬ್ಯುಲೆನ್ಸ್‌ನಲ್ಲಿ 14ನೇ ಮಗುವಿಗೆ ಜನ್ಮ ನೀಡಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಯಿತಾದರೂ, ಮಾರ್ಗಮಧ್ಯೆ ಅವಶ್ಯಕತೆ ಎದುರಾಗಿದ್ದು, ವೈದ್ಯಕೀಯ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಆಂಬ್ಯುಲೆನ್ಸ್‌ನಲ್ಲಿಯೇ ಸುರಕ್ಷಿತ ಹೆರಿಗೆ ನಡೆಯಿತು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಗುಡಿಯಾ ಅವರ ಪತಿ ಇಮಾಮುದ್ದೀನ್, ಅವರ 22 ವರ್ಷದ ಮಗ ಈ ಸಂದರ್ಭದಲ್ಲಿ ಜತೆಗಿದ್ದು, ತಾಯಿಯ ಆರೈಕೆಯಲ್ಲಿ ನಿರತನಾಗಿದ್ದರು. ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣವೇ ತೊಂದರೆ ಗುರುತಿಸಿ, ಲಭ್ಯವಿದ್ದ ವೈದ್ಯಕೀಯ ಕಿಟ್‌ನ ನೆರವಿನಿಂದ ಹೆರಿಗೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದರು.
ಈ ಘಟನೆ ಸಂಬಂಧ ತಾಯಿಯ ಹಾಗೂ ಮಗುವಿನ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರು ಭಿನ್ನಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದನ್ನು ಅಚ್ಚರಿ ಮತ್ತು ಶೌರ್ಯದ ಘಟನೆಯೆಂದು ಕೊಂಡಾಡಿದರೆ, ಇತರರು ಹಿರಿಯ ವಯಸ್ಸಿನಲ್ಲಿ ನಿರಂತರ ಗರ್ಭಧಾರಣೆಯ ಆರೋಗ್ಯದ ಅಪಾಯಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.
ಈ ನಡುವೆ ಗುಡಿಯಾ ಸ್ವತಃ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ತಾನು 14 ಮಕ್ಕಳು ಹೊಂದಿಲ್ಲ, ನವಜಾತ ಸೇರಿ ಒಟ್ಟು 9 ಮಕ್ಕಳ ತಾಯಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಅವರಲ್ಲಿ 4 ಗಂಡು ಮಕ್ಕಳು, 5 ಹೆಣ್ಣು ಮಕ್ಕಳು ಬದುಕಿದ್ದಾರೆ, ಆದರೆ 2-3 ಮಕ್ಕಳು ಚಿಕ್ಕಂದರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ದಾಖಲೆಗಳ ಪ್ರಕಾರ ಇದು ಗುಡಿಯಾಳಿಗೆ 14ನೇ ಹೆರಿಗೆ ಎಂದು ಹೇಳಲಾಗಿದ್ದು, ಈ ಪ್ರಕರಣ ಹಿರಿಯ ವಯಸ್ಸಿನ ಗರ್ಭಧಾರಣೆಯ ಆರೋಗ್ಯಪರ ಪರಿಣಾಮಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
