ಪತ್ನಿಯ ಜೀವನಾಂಶ ₹15 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಪತ್ನಿಗೆ ಜೀವನಾಂಶ ನೀಡುವ ವಿಚಾರದಲ್ಲಿ ಗಂಡನ ಸಾಮರ್ಥ್ಯ ಹಾಗೂ ಪತ್ನಿಯ ಅಗತ್ಯವನ್ನು ಸುಪ್ರೀಂ ಕೋರ್ಟ್ ಪರಿಗಣನೆಗೆ ತೆಗೆದುಕೊಂಡಿದೆ.

ವೈದ್ಯಕೀಯ ಪದವಿ ಹೊಂದಿರುವ ಪತಿಯು ಹೆಚ್ಚಿನ ಮೊತ್ತ ಪಾವತಿಸುವ ಸಾಮರ್ಥ್ಯ ಹೊಂದಿದ್ದು, ಎಂ.ಟೆಕ್ ಮತ್ತು ಎಲ್‌ಎಲ್‌ಬಿ ಪದವಿ ಹೊಂದಿರುವ ಪತ್ನಿಗೆ ಶಾಶ್ವತ ಜೀವನಾಂಶವನ್ನು ₹15 ಲಕ್ಷದಿಂದ ₹50 ಲಕ್ಷಕ್ಕೆ ಹೆಚ್ಚಿಸಿ, ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ನ್ಯಾಯಪೀಠವು ತೀರ್ಪು ನೀಡಿದೆ.
ನ್ಯಾಯಾಲಯವು ಮಹಿಳೆಯ ಮನವಿಯನ್ನು ಭಾಗಶಃ ಅಂಗೀಕರಿಸಿ, ವಿಚ್ಛೇದನದ ತೀರ್ಪನ್ನು ಎತ್ತಿಹಿಡಿಯಿತು. ಆದರೆ, ಕರ್ನಾಟಕ ಹೈಕೋರ್ಟ್ ಆದೇಶವನ್ನು ಮಾರ್ಪಡಿಸಿ, ಮೇಲ್ಮನವಿ ಸಲ್ಲಿಸಿದ್ದ ಪತ್ನಿಗೆ ನೀಡಬೇಕಿರುವ ಶಾಶ್ವತ ಜೀವನಾಂಶವನ್ನು ₹50 ಲಕ್ಷಕ್ಕೆ ಹೆಚ್ಚಿಸಿತು.
‘ಜೀವನಾಂಶ ನಿರ್ಧರಿಸಲು ಅನೇಕ ಅಂಶಗಳನ್ನು ಪರಿಗಣಿಸುವ ಅಗತ್ಯವಿದೆ. ಪ್ರತಿವಾದಿಯು ಕೌಟುಂಬಿಕ ನ್ಯಾಯಾಲಯವು ಸೂಚಿಸಿದ್ದಕ್ಕಿಂತ ಹೆಚ್ಚಿನ ಮೊತ್ತ ಜೀವನಾಂಶ ಪಾವತಿಸಲು ಅರ್ಹರಾಗಿದ್ದಾರೆ ಎಂದು ದಾಖಲೆಗಳಿಂದ ಕಂಡುಬಂದಿದೆ. ಅರ್ಜಿದಾರರು ನಿರುದ್ಯೋಗಿ ಎಂದು ಹೇಳಿಕೊಂಡಿದ್ದು, ಹೆಚ್ಚು ಅರ್ಹತೆ, ಸಂಪಾದಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ತೀವ್ರ ಆರ್ಥಿಕ ಅಭಾವದ ಸ್ಥಿತಿಯಲ್ಲಿಲ್ಲ’ ಎಂದು ನ್ಯಾಯಪೀಠವು ಒತ್ತಿ ಹೇಳಿದೆ.
ಅರ್ಜಿದಾರ ದಂಪತಿಯು 2009ರ ಫೆಬ್ರುವರಿ 27ರಂದು ಮದುವೆಯಾಗಿದ್ದರು. ಪತಿಯು 2009ರಿಂದ 2010ರವರೆಗೂ ಚಂಡೀಗಢದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿದ್ದ ವೇಳೆ ತಾನು ಆರ್ಥಿಕ ನೆರವು ನೀಡಿದ್ದೆ ಎಂದು ಪತ್ನಿ ಅರ್ಜಿಯಲ್ಲಿ ತಿಳಿಸಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಇಬ್ಬರ ನಡುವೆ ಉಂಟಾದ ಮನಸ್ತಾಪದಿಂದ ವಿಚ್ಛೇದನಕ್ಕೆ ಮುಂದಾಗಿದ್ದರು. ಪತಿಯು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಕೌಟುಂಬಿಕ ನ್ಯಾಯಾಲಯವು 2015ರಲ್ಲಿ ವಿಚ್ಛೇದನ ನೀಡಿ, ₹15 ಲಕ್ಷ ಶಾಶ್ವತ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು.
ಇಬ್ಬರು ಕೂಡ ಈ ವಿಚಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ವೇಳೆ ಇಬ್ಬರ ಆದಾಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಿತ್ತು. ಆ ವೇಳೆ, ವೈದ್ಯ ಪತಿಯು ಮಾಸಿಕ ₹1.40 ಲಕ್ಷ ವೇತನ ಪಡೆದಿರುವುದಾಗಿ ದಾಖಲೆ ಸಲ್ಲಿಸಿದ್ದರು. ಪತ್ನಿ ತಾನು ನಿರುದ್ಯೋಗಿ ಎಂದು ಹೇಳಿಕೊಂಡಿದ್ದರು. ಇಬ್ಬರ ಮನವಿಯನ್ನು ಪರಿಗಣಿಸಿದ್ದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿದ್ದ ಪತ್ನಿ ಹೆಚ್ಚಿನ ಜೀವನಾಂಶ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
