ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ: ಅಕ್ಟೋಬರ್ 18 ರಿಂದ 21 ರವರೆಗೆ ಮಾತ್ರ ಅವಕಾಶ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಸಿರು ಪಟಾಕಿ (Green Crackers) ಸಿಡಿಸಲು ಸುಪ್ರೀಂ ಕೋರ್ಟ್ (Supreme Court) ಅವಕಾಶ ನೀಡಿದೆ. ಅಕ್ಟೋಬರ್ 18ರಿಂದ 21ರವರೆಗೆ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಪಟಾಕಿ ಸಿಡಿಸುವ ಬಗ್ಗೆ ಸಮತೋಲನದ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯದ ನಗರಗಳಲ್ಲಿ ಪಟಾಕಿ ಸಿಡಿತದಿಂದ ವಾಯು ಮಾಲಿನ್ಯ ಮಿತಿ ಮೀರುತ್ತದೆ. ಮೂರು ನಾಲ್ಕು ದಿನಗಳವರೆಗೂ ಜನರು ಮನೆಯಿಂದ ಹೊರ ಬರಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗುತ್ತದೆ. ಮನೆಯಿಂದ ಹೊರ ಬಂದರೆ, ಕಣ್ಣು ಉರಿ, ಕಣ್ಣೀರು ಬರುತ್ತದೆ. ಅಷ್ಟರ ಮಟ್ಟಿಗೆ ದೆಹಲಿಯಲ್ಲಿ ಪಟಾಕಿಗಳಿಂದ ವಾಯು ಮಾಲಿನ್ಯವಾಗುತ್ತದೆ. ಹೀಗಾಗಿ ಕೆಲವೊಮ್ಮೆ ಪಟಾಕಿ ಸಿಡಿಸಲು ನಿರ್ಬಂಧ ವಿಧಿಸಲಾಗುತ್ತದೆ. ಆದರೆ ಸುಪ್ರೀಂಕೋರ್ಟ್ ಈಗ ಹಸಿರು ಪಟಾಕಿಗೆ ಮಾತ್ರ ದೆಹಲಿಯಲ್ಲಿ ಅವಕಾಶ ನೀಡಿದೆ.
QR ಕೋಡ್‌ಗಳನ್ನು ಹೊಂದಿರುವ ಅನುಮೋದಿತ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಗಸ್ತು ತಂಡಗಳನ್ನು ರಚಿಸುವಂತೆ ನ್ಯಾಯಾಲಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
ದೆಹಲಿ-ಎನ್‌ಸಿಆರ್ ಪ್ರದೇಶದ ಹೊರಗಿನಿಂದ ಬರುವ ಯಾವುದೇ ಪಟಾಕಿಗಳನ್ನು ಆ ಪ್ರದೇಶದಲ್ಲಿ ಅನುಮತಿಸಲಾಗುವುದಿಲ್ಲ. ನಕಲಿ ಅಥವಾ ಅನಧಿಕೃತ ಪಟಾಕಿಗಳ ಮಾರಾಟಗಾರರು ಕಂಡುಬಂದರೆ ಅವರ ಪರವಾನಗಿಗಳನ್ನು ಅಮಾನತುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ದೀಪಾವಳಿ ಸಮಯದಲ್ಲಿ ಬೆಳಗ್ಗೆ 6ರಿಂದ 7ಗಂಟೆಯವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಸುಪ್ರೀಂ ಅನುಮತಿ ಕೊಟ್ಟಿದೆ.
ಈ ಮೊದಲು ಹಸಿರು ಪಟಾಕಿ ಉತ್ಪಾದನೆಗೆ ಅವಕಾಶ ನೀಡಿ ಮಾರಾಟಕ್ಕೆ ನಿಷೇಧ ಹೇರಿತ್ತು. ಆದೇಶ ಮರು ಪರಿಶೀಲನೆ, ಹಸಿರು ಪಟಾಕಿ ಸಿಡಿಸಲು ಅನುಮತಿ ಕೋರಿ ದೆಹಲಿ ಎನ್‌ಸಿಆರ್ ರಾಜ್ಯಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ವಿಚಾರಣೆ ಬಳಿಕ ಹಸಿರು ಪಟಾಕಿ ಸಿಡಿಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ.