ದೆಹಲಿ-ಎನ್‌ಸಿಆರ್‌ನಲ್ಲಿ ಪಟಾಕಿ ಮಾರಾಟ ನಿಷೇಧಿಸಿದ ಸುಪ್ರೀಂಕೋರ್ಟ್

ನವದೆಹಲಿ :ದೀಪಾವಳಿ ಸಮೀಪಿಸುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಮಾಲಿನ್ಯದ ಆತಂಕ ಎದುರಾಗಿದೆ. ಈ ನಡುವೆ ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದೆಹಲಿ – ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟವನ್ನು ನಿಷೇಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠವು, ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಪಟಾಕಿಗಳ ಮಾರಾಟ ಮತ್ತು ತಯಾರಿಕೆಯ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ತಿಳಿಸಿತು.ಸುಪ್ರೀಂಕೋರ್ಟ್ ದೆಹಲಿಯಲ್ಲಿ ಪಟಾಕಿ ತಯಾರಕರಿಗೆ ಹಸಿರು ಪಟಾಕಿಗಳನ್ನು ತಯಾರಿಸಲು ಅನುಮತಿ ನೀಡಿತು. ಆದಾಗ್ಯೂ, ಮುಂದಿನ ಆದೇಶದವರೆಗೆ ಈ ಪಟಾಕಿಗಳನ್ನು ದೆಹಲಿ-ಎನ್‌ಸಿಆರ್‌ನಲ್ಲಿ ಮಾರಾಟ ಮಾಡಬಾರದು. ಹಸಿರು ಪಟಾಕಿ ಪ್ರಮಾಣಪತ್ರ ಹೊಂದಿರುವ ತಯಾರಕರು ಮಾತ್ರ ಪಟಾಕಿಗಳನ್ನು ತಯಾರಿಸಬೇಕು ಎಂಬ ಷರತ್ತನ್ನು ನ್ಯಾಯಾಲಯ ವಿಧಿಸಿದೆ. ಈ ಪ್ರಮಾಣಪತ್ರವನ್ನು ಎನ್‌ಇಇಆರ್‌ಐ ಮತ್ತು ಪಿಇಎಸ್‌ಒ ನಂತಹ ಅಧಿಕೃತ ಏಜೆನ್ಸಿಗಳು ನೀಡಬೇಕು ಎಂದು ಕೋರ್ಟ್ ಸ್ಪಷ್ಟ ಪಡಿಸಿದೆ.ದೆಹಲಿ-ಎನ್‌ಸಿಆರ್‌ನಲ್ಲಿ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪಟಾಕಿ ತಯಾರಕರು ಲಿಖಿತ ಭರವಸೆ ನೀಡಬೇಕಾಗುತ್ತದೆ. ದೀಪಾವಳಿಯ ಸಮಯದಲ್ಲಿ ಈ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗಿರುವ ಹಿನ್ನೆಲೆ ಕೋರ್ಟ್ ಈ ಷರತ್ತು ವಿಧಿಸಿದೆ. ಈ ವಿಷಯದ ಕುರಿತು ಮುಂದಿನ ವಿಚಾರಣೆಯಲ್ಲಿ, ಮಾರಾಟವನ್ನು ತಡೆಯಲು ಮುಂದಿನ ಹಂತದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸುಪ್ರೀಂಕೋರ್ಟ್ ತೀರ್ಮಾನಿಸಲಿದೆ.
