ಸೂಪರ್‌ಸ್ಟಾರ್ ರಜನಿಕಾಂತ್ ಸರಳತೆ: ರಿಷಿಕೇಶದಲ್ಲಿ ರಸ್ತೆ ಬದಿಯ ಎಲೆ ಊಟ; ವೈರಲ್ ಆಯ್ತು ಆಧ್ಯಾತ್ಮಿಕ ವಿರಾಮದ ಫೋಟೋ!

ನಟ ರಜನಿಕಾಂತ್ ‘ಕೂಲಿ’ ಸಿನಿಮಾ ಬಳಿಕ ಆಧ್ಯಾತ್ಮಿಕ ವಿರಾಮಕ್ಕಾಗಿ ರಿಷಿಕೇಶಕ್ಕೆ ತೆರಳಿದ್ದಾರೆ. ನೂರಾರು ಕೋಟಿ ಸಂಪಾದಿಸಿದರೂ, ಅಲ್ಲಿ ಸರಳವಾಗಿ ರಸ್ತೆ ಬದಿಯಲ್ಲಿ ಊಟ ಸವಿಯುತ್ತಿದ್ದಾರೆ. ಅವರ ಈ ಫೋಟೋ ವೈರಲ್ ಆಗಿದೆ. ದಯಾನಂದ ಆಶ್ರಮಕ್ಕೆ ಭೇಟಿ ನೀಡಿ, ಗಂಗಾ ನದಿಯಲ್ಲಿ ಧ್ಯಾನ ಮಾಡಿದ್ದಾರೆ

ನಟ ರಜನಿಕಾಂತ್ (Rajinikanth) ಅವರು ಸೂಪರ್ ಸ್ಟಾರ್. ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಅವರು ಹೊಂದಿದ್ದಾರೆ. ಆದಾಗ್ಯೂ ಸರಳ ಜೀವನ ನಡೆಸಲು ಅವರು ಆದ್ಯತೆ ನೀಡುತ್ತಾರೆ. ಅವರ ತಲೆಯ ಮೇಲೆ ಕೂದಲು ಉದುರಿದೆ. ಆದರೆ, ಇತರ ಹೀರೋಗಳಂತೆ ತೆರೆ ಹಿಂದೆ ಅವರು ಟೋಪನ್ ಹಾಕುವುದಿಲ್ಲ. ಹೇಗಿದ್ದಾರೋ ಹಾಗೆಯೇ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಈಗ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ರಿಷಿಕೇಶಕ್ಕೆ ತೆರಳಿರೋ ಅವರು ಅಲ್ಲಿ, ಸರಳವಾಗಿ ರಸ್ತೆ ಬದಿಯಲ್ಲಿ ನಿಂತು ಎಲೆಯ ಪ್ಲೇಟ್ನಲ್ಲಿ ಊಟ ಸವಿಯುತ್ತಿದ್ದಾರೆ.
ರಜನಿಕಾಂತ್ ಅವರು ಪ್ರತಿ ಸಿನಿಮಾ ರಿಲೀಸ್ ಬಳಿಕ ಒಂದು ಆಧ್ಯಾತ್ಮಿಕ ಬ್ರೇಕ್ ಪಡೆಯುತ್ತಾರೆ. ರಿಷಿಕೇಶ ಹಾಗೂ ಇತರ ಪವಿತ್ರ ಸ್ಥಳಗಳಿಗೆ ತೆರಳಿ ಕೆಲ ದಿನ ಇದ್ದು ಬರುತ್ತಾರೆ. ಅವರ ನಟನೆಯ ‘ಕೂಲಿ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಜನಿಕಾಂತ್ ಅವರು ರಿಷಿಕೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಸರಳ ಜೀವನ ನಡೆಸುತ್ತಿದ್ದಾರೆ.