Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಬ್ಬು ದರ ಸಮರ: ‘ಕೇಂದ್ರದ ರೈತ ದ್ರೋಹಿ ನೀತಿಗೆ ಬಲಿಯಾಗಬೇಡಿ’; ರೈತರ ಪ್ರತಿಭಟನೆಗೆ ಬಿಜೆಪಿ ರಾಜಕಾರಣವೇ ಕಾರಣ ಎಂದ ಸಿಎಂ ಸಿದ್ದರಾಮಯ್ಯ

Spread the love

ಬೆಂಗಳೂರು: ರೈತರ ಉತ್ಪನ್ನಕ್ಕೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ನಿರ್ಧರಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರ. ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ರಾಜ್ಯದ ಬಿಜೆಪಿ ನಾಯಕರ ಮರಳು ಮಾತುಗಳಿಗೆ ಬಲಿಯಾಗಬಾರದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಕ್ಯಾಬಿನೆಟ್‌ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಬಂಧಪಟ್ಟ ಸಚಿವರಾದ ಪ್ರಹ್ಲಾದ್ ಜೋಶಿಯವರು ಏಕೆ ರೈತರ ಪ್ರತಿಭಟನಾ ಸಭೆಗೆ ಹೋಗಿಲ್ಲ. ಸಕ್ಕರೆ ರಫ್ತು ನಿಯಮದಲ್ಲಿ ಕೇಂದ್ರದ ನೀತಿ ಮತ್ತು ಎಫ್‌ಆರ್‌ಪಿ ನಿಗದಿಯಲ್ಲಿ ಕೇಂದ್ರದ ತೀರ್ಮಾನದಿಂದ ಆಗಿರುವ ಅನಾಹುತದ ಕುರಿತು ಪ್ರಧಾನಿ ಜೊತೆ ಚರ್ಚಿಸಲು ಸಂಪುಟದಲ್ಲಿ ನಿರ್ಣಯಿಸಲಾಗಿದೆ ಎಂದರು.

ಸುದ್ದಿಗೋಷ್ಠಿ ಬಳಿಕ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್‌ ಪ್ರಕಟಿಸಿ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸಿಎಂ ಪೋಸ್ಟ್‌ನಲ್ಲಿ ಏನಿದೆ?
ಕಳೆದ ಕೆಲವು ದಿನಗಳಿಂದ ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ನನಗೆ ಸ್ಪಷ್ಟ ಮಾಹಿತಿ ಇದೆ. ಹಾಗಾಗಿ ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮತ್ತು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಇಲಾಖೆಯ ಆಯುಕ್ತರಿಗೆ ಸೂಚನೆಗಳನ್ನು ನೀಡಿ ರೈತರು ಹಾಗೂ ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿ ಶೇ.11.25 ರಿಕವರಿ ಬಂದರೆ 3,200 ರೂ. ಹಾಗೂ ಶೇ.10.25 ರಿಕವರಿ ಬಂದರೆ 3,100 ರೂ. ಗಳನ್ನು (ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ) ಪಾವತಿಸುವಂತೆ ಕಾರ್ಖಾನೆಗಳ ಮಾಲೀಕರಿಗೆ ಮನವೊಲಿಸಿದ್ದಾರೆ. ಹಾಗೆಯೇ, ರೈತರಿಗೂ ಮನವೊಲಿಸುವ ಕೆಲಸ ಮಾಡಿದ್ದಾರೆ. ಆದರೆ, ವಿರೋಧ ಪಕ್ಷಗಳವರು ಈ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವುದರಿಂದ ವಿಷಯ ತುಸು ಗೊಂದಲಕರವಾಗಿದೆ.

ವಾಸ್ತವವಾಗಿ ನೋಡಿದರೆ, ಕಬ್ಬು ಮತ್ತು ಸಕ್ಕರೆ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಅತ್ಯಂತ ನಗಣ್ಯವಾಗಿದೆ. ಕೇಂದ್ರ ಸರ್ಕಾರವು ಪ್ರತಿ ವರ್ಷ ‍ಎಫ್.ಆರ್.ಪಿ (Fair and Remunerative Price) ಯನ್ನು ನಿಗದಿಪಡಿಸುತ್ತದೆ. ಅದರಂತೆ ಮೇ 6 ರಂದು ಕೇಂದ್ರ ಸರ್ಕಾರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯವು ಆದೇಶ ಹೊರಡಿಸಿದೆ.

ಈ ದರವನ್ನು ಕೇಂದ್ರ ಸರ್ಕಾರವೇ ನಿಗದಿ ಮಾಡಿದೆ. ಕೇಂದ್ರ ಸರ್ಕಾರವು ನಿಗದಿ ಮಾಡಿರುವ ದರ ರೈತರಿಗೆ ಲಭಿಸುತ್ತಿದೆಯೇ ಎಂದು ನೋಡಿಕೊಳ್ಳುವುದು ಹಾಗೂ ರೈತರಿಗೆ ತೂಕ, ಬೆಲೆ, ಹಾಗೂ ನಿಗದಿತ ಅವಧಿಯಲ್ಲಿ ಪಾವತಿ ಇತ್ಯಾದಿಗಳನ್ನು ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಹಾಗೂ ಕಬ್ಬು ನಿಯಂತ್ರಣಕ್ಕೆ ಸಂಬಂಧಪಟ್ಟ ಕಾಯ್ದೆಯಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ.

ಎಫ್.ಆರ್.ಪಿಯನ್ನು (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ನಿಗದಿಪಡಿಸುವುದಷ್ಟೆ ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ. ಸಕ್ಕರೆ ಮೇಲಿನ ನಿಯಂತ್ರಣವನ್ನು ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರವೇ ಹೊಂದಿರುತ್ತದೆ. ಹಿಂದೆ ಯುಪಿಎ ಸರ್ಕಾರದ ಅವಧಿಯಿಂದಲೂ 2017-18 ರವರೆಗೆ ರಿಕವರಿ ಪ್ರತಿ ಕ್ವಿಂಟಾಲಿಗೆ ಶೇ. 9.5 ರಷ್ಟನ್ನು ನಿಗದಿಪಡಿಸಲಾಗುತ್ತಿತ್ತು. 2018-19 ನಿಂದ 2021-22 ರವರೆಗೆ ಅದನ್ನು ಶೇ.10 ಕ್ಕೆ ಹೆಚ್ಚಿಸಲಾಯಿತು. 2022-23 ರಿಂದ ಈಚೆಗೆ ಎಫ್‌ಆರ್‌ಪಿಯನ್ನು ಶೇ. 10.25 ಕ್ಕೆ ಏರಿಕೆ ಮಾಡಲಾಗಿದೆ. ಈ ವಿಚಾರದಲ್ಲೂ ನಮ್ಮ ರೈತರಿಗೆ ಅನ್ಯಾಯ ಮಾಡಲಾಗಿದೆ.

ಸಕ್ಕರೆಗೆ 2019ರಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ) ಯನ್ನು ಕಡೆಯದಾಗಿ ನಿಗದಿಪಡಿಸಲಾಯಿತು. ಆಗ ಪ್ರತಿ ಕೆಜಿಗೆ 31 ರೂ. ನಿಗದಿ ಮಾಡಲಾಗಿತ್ತು. ಆನಂತರ ಎಂ.ಎಸ್.ಪಿ ಯನ್ನು ಪರಿಷ್ಕರಿಸಲಿಲ್ಲ. ಜೊತೆಗೆ ಕಳೆದ ಕೆಲವು ವರ್ಷಗಳಿಂದಲೂ ಕೇಂದ್ರ ಸರ್ಕಾರವು ಸಕ್ಕರೆ ರಫ್ತನ್ನು ನಿಲ್ಲಿಸಿದೆ. ಕಳೆದ ವರ್ಷ ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಕರ್ನಾಟಕವೊಂದರಲ್ಲೆ 41 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ಕಾರಣದಿಂದಲೂ ರೈತರಿಗೆ ಸಮಸ್ಯೆಯಾಗುತ್ತಿದೆ. ಎಥೆನಾಲ್ ವಿಚಾರದಲ್ಲೂ ಸಹ ಕೇಂದ್ರ ಸರ್ಕಾರವು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ. ಕರ್ನಾಟಕದಲ್ಲಿ 270 ಕೋಟಿ ಲೀಟರ್‌ ಉತ್ಪಾದನಾ ಸಾಮರ್ಥ್ಯ ಇದ್ದರೂ ಸಹ 2024-25 ರಲ್ಲಿ 47 ಕೋಟಿ ಲೀಟರ್‌ಗಳನ್ನು ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಮಾಡಲಾಗಿದೆ.

ಇದು ಕೇಂದ್ರ ಸರ್ಕಾರವು ರಾಜ್ಯದ ರೈತರ ಬದುಕಿನೊಂದಿಗೆ ಆಡುತ್ತಿರುವ ಚೆಲ್ಲಾಟಕ್ಕೆ ಸ್ಪಷ್ಟ ನಿದರ್ಶನವಾಗಿದೆ. ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ತೂಕದಲ್ಲಿ ನಡೆಯುತ್ತಿದ್ದ ಮೋಸವನ್ನು ತಡೆಗಟ್ಟಲು ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲೂ ಡಿಜಿಟಲ್ ತೂಕ ಯಂತ್ರವನ್ನು ಅಳವಡಿಸಲಾಗಿದೆ. ಸರ್ಕಾರದ ವತಿಯಿಂದಲೇ 11 ಜಾಗಗಳಲ್ಲಿ ಡಿಜಿಟಲ್ ತೂಕ ಯಂತ್ರಗಳನ್ನು ಅಳವಡಿಸಲು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ. ಇದರ ಜೊತೆಗೆ ತೂಕ, ಇಳುವರಿ, ಕಟಾವು ಮತ್ತು ಬಿಲ್ ಪಾವತಿಗಳಿಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರವು ಉಚಿತವಾಗಿ ಎಪಿಎಂಸಿ ಗಳಲ್ಲಿ ಸ್ಥಾಪಿಸಿರುವ ತೂಕದ ಯಂತ್ರಗಳಲ್ಲಿ ಉಚಿತವಾಗಿ ತೂಕ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಿದ್ದೇವೆ.

2024-25 ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು 522 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದಿವೆ. ರೈತರಿಗೆ ಈ ಅವಧಿಯಲ್ಲಿ 18,221.88 ಕೋಟಿ ರೂ. ಗಳನ್ನು ಎಫ್‌ಆರ್‌ಪಿ ದರದಂತೆ ಪಾವತಿಸಬೇಕಾಗಿತ್ತು. ಆದರೂ ಸಹ ಕೆಲವು ಕಡೆ ರಿಕವರಿ (ಸಕ್ಕರೆ ಇಳುವರಿ) ಹೆಚ್ಚು ಬಂದ ಕಾರಣ 19,569.15 ಕೊಟಿ ರೂ. ಗಳನ್ನು ರೈತರಿಗೆ ಪಾವತಿಸುವಂತೆ ನೋಡಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ.

ಇಷ್ಟೆಲ್ಲಾ ಮಾಡಿದ್ದರೂ ಸಹ, ರೈತರ ಮುಗ್ಧತೆಯನ್ನು ವಿರೋಧ ಪಕ್ಷದವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ಬಿ.ಜೆ.ಪಿ. ಯವರ ಮರಳು ಮಾತುಗಳಿಗೆ ಬಲಿಯಾಗಬಾರದು. ನಮ್ಮ ಸರ್ಕಾರವು ಸಂವಾದದಲ್ಲಿ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ ಮತ್ತು ನಿರಂತರವಾಗಿ ರೈತ ಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾ ಬಂದಿದೆ.

ಆದ್ದರಿಂದ, ನಾಳೆ ಬೆಳಿಗ್ಗೆ 11.00 ಗಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರುಗಳ ಜೊತೆ ಹಾಗೂ ಮಧ್ಯಾಹ್ನ 1.00 ಗಂಟೆಗೆ ರೈತ ಮುಖಂಡರುಗಳ ಜೊತೆ ಚರ್ಚಿಸಲು ಸಭೆ ಕರೆದಿದ್ದೇವೆ. ಸದರಿ ಸಭೆಯಲ್ಲಿ ಎರಡೂ ಕಡೆಯ ಅಹವಾಲುಗಳನ್ನು ಆಲಿಸಿ ರಾಜ್ಯ ಸರ್ಕಾರವು ತನ್ನ ಮಿತಿಯಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ.

ರಾಜ್ಯದ ಕಬ್ಬು ಬೆಳೆಯುವ ರೈತರು ಸರ್ಕಾರದ ಮೇಲೆ ವಿಶ್ವಾಸವಿಡಬೇಕೆಂದು ಹಾಗೂ ವಿರೋಧ ಪಕ್ಷಗಳ ರಾಜಕಾರಣಕ್ಕೆ ಬಲಿಯಾಗಬಾರದೆಂದು ನಾನು ಮನವಿ ಮಾಡುತ್ತೇನೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರ ವಿಚಾರದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಆದ್ದರಿಂದ ತುರ್ತಾಗಿ ಭೇಟಿಗೆ ಅವಕಾಶ ನೀಡಬೇಕೆಂದು ಪತ್ರ ಬರೆಯಲು ಹಾಗೂ ಪ್ರಧಾನಮಂತ್ರಿಗಳ ಕಛೇರಿಯನ್ನು ಸಂಪರ್ಕಿಸಲು ತೀರ್ಮಾನಿಸಲಾಗಿದೆ. ಕೂಡಲೇ ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ಮುಖ್ಯವಾಗಿ ರಿಕವರಿ ಪ್ರಮಾಣವನ್ನು ಇಳಿಸುವುದು, ಎಫ್.ಆರ್.ಪಿ. ದರ ಪರಿಷ್ಕರಿಸುವುದು, ಸಕ್ಕರೆ ರಫ್ತು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಒತ್ತಾಯಿಸುವಂತೆ ಚರ್ಚಿಸಲಾಯಿತು ಎಂಬುದನ್ನು ರೈತ ಮುಖಂಡರುಗಳ ಗಮನಕ್ಕೆ ತರಬಯಸುತ್ತೇವೆ.

ಕೇಂದ್ರ ಸರ್ಕಾರವು ರಾಜ್ಯದ ವಿಚಾರದಲ್ಲಿ ತೋರುತ್ತಿರುವ ಮಲತಾಯಿ ಧೋರಣೆಯು ರೈತರ ಅನ್ನದ ತಟ್ಟೆಯವರೆಗೂ, ರೈತರ ಭೂಮಿಯವರೆಗೂ ಬಂದಿದೆ. ಈ ವಿಚಾರದಲ್ಲಿ ನಾವು ಅಧಿಕಾರಕ್ಕೆ ಬಂದಾಗಿನಿಂದ ಧ್ವನಿ ಎತ್ತುತ್ತಿದ್ದೇವೆ. ಹಾಗಾಗಿ ನಮ್ಮ ಎಲ್ಲಾ ಪ್ರಯತ್ನಗಳ ಜೊತೆಯಲ್ಲಿ ತಾವೂ ಜೊತೆಗೂಡಬೇಕೆಂದು ಮನವಿ ಮಾಡುತ್ತೇನೆ. ಎಷ್ಟು ಬಿಕ್ಕಟ್ಟುಗಳು ಬಂದರೂ ನಮ್ಮ ಸರ್ಕಾರವು ರೈತ ಪರವಾಗಿದೆ ಎಂಬುದನ್ನು ಸಹ ತಮ್ಮ ಗಮನಕ್ಕೆ ತರಬಯಸುತ್ತೇನೆ.

ಕೆಲವು ರೈತ ಮುಖಂಡರುಗಳು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಕುರಿತು ಪ್ರಸ್ತಾಪಿಸಿರುವುದು ಗಮನಕ್ಕೆ ಬಂದಿದೆ. ನನಗೆ ಮಾಹಿತಿ ಇರುವ ಹಾಗೆ ಮಹಾರಾಷ್ಟ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಲ್ಲಿ 2,515 ರೂ. ರಿಂದ 3,635 ರೂ. ಗಳವರೆಗೆ ಕಬ್ಬಿಗೆ ಬೆಲೆಗಳನ್ನು ನೀಡುತ್ತಿವೆ. ನಾಳೆಯ ಸಭೆಯಲ್ಲಿ ಈ ವಿಚಾರವನ್ನು ಸಹ ಚರ್ಚಿಸಿ ತೀರ್ಮಾನಿಸಲಾಗುವುದು.


Spread the love
Share:

administrator

Leave a Reply

Your email address will not be published. Required fields are marked *