ಕಬ್ಬು ದರ ನಿಗದಿ ಹೋರಾಟ ತೀವ್ರ ಸ್ವರೂಪ: ಅಥಣಿ, ಹುಕ್ಕೇರಿ ಸಂಪೂರ್ಣ ಸ್ತಬ್ಧ; ರಸ್ತೆ ತಡೆದು ರೈತರಿಂದ ಅಹೋರಾತ್ರಿ ಧರಣಿ

ಬೆಳಗಾವಿ/ಬಾಗಲಕೋಟೆ: ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿಯ ರೈತರ ಪ್ರತಿಭಟನೆ (Farmers Protest) ತೀವ್ರ ಸ್ವರೂಪ ಪಡೆದಿದೆ. ಜಿಲ್ಲೆಯ ಅಥಣಿಯಲ್ಲಿ ರೈತರು, ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಬಂದ್ಗೆ ಕರೆ ನೀಡಿದ್ದಾರೆ. ಬೆಳಗಾವಿಯ (Belagavi) ಅಥಣಿ, ಚಿಕ್ಕೋಡಿ, ಗುರ್ಲಾಪುರ, ಜಾಂಬೋಟಿ, ಗೋಕಾಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅಂಗಡಿ ಮಳಿಗೆಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಟ್ಟಿವೆ. ಗೋಕಾಕ್-ಅಥಣಿ ರಸ್ತೆ, ದರೂರ ಹಲ್ಯಾಳ ಸೇತುವೆ ಮೆಲೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನೂ, ಕಬ್ಬಿನ (Sugarcane Crop) ಬೆಲೆ ನಿಗದಿಗೆ ಆಗ್ರಹಿಸಿ ಇಂದು ಹುಕ್ಕೇರಿ ಪಟ್ಟಣ ಬಂದ ಕರೆ ನೀಡಲಾಗಿತ್ತು. ರೈತ ಸಂಘಟನೆಗಳಿಂದ ಬಂದ್ ಕರೆ ನೀಡಲಾಗಿದ್ದು ರೈತ ಸಂಘಟನೆಗೆ ವಿವಿಧ ಸಂಘಟನೆಗಳ ಬೆಂಬಲ ನೀಡಿವೆ. ಬಂದ್ ಕರೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ಹುಕ್ಕೇರಿ ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಕೋರ್ಟ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ನಡೆದಿದ್ದು ರ್ಯಾಲಿ ಬಳಿಕ ಹೆದ್ದಾರಿ ಬಂದ್ ಮಾಡಿ ಅಹೋರಾತ್ರಿ ಧರಣಿ ಜೋರಾಗಿದೆ. ಹೆದ್ದಾರಿ ಬಂದ್ ಮಾಡಿರುವ ಕಾರಣ ಪರ್ಯಾಯ ಮಾರ್ಗಗಳ ಮೂಲಕ ವಾಹನ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನೂ ಬಂದ್ ಹಿನ್ನೆಲೆಯಲ್ಲಿ ರೈತರು ಒತ್ತಾಯ ಪೂರ್ವಕವಾಗಿ ಅಂಗಡಿ ಹಾಗೂ ರಸ್ತೆಗಳನ್ನ ಬಂದ್ ಮಾಡಿಸಿದ್ದಾರೆ. ಬ್ಯಾರಿಕೇಡ್ ಹಾಗೂ ಜೆಸಿಬಿ ಅಳವಡಿಸಿ ರೈತರು ರಸ್ತೆ ಬಂದ್ ಮಾಡಿಸಿದ್ದಾರೆ.
ರೈತರ ಪ್ರತಿಭಟನೆಗೆ ವಿಜಯೇಂದ್ರ ಸಾಥ್
ಶಿವಯೋಗಿ ವೃತ್ತದಲ್ಲಿ ಜತ್ತ ಜಂಬೋಟಿ- ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆ ಮಾಡಿದ್ರು. ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಆಗಮಿಸಿ ಪ್ರತಿಭಟನಾ ನಿರತ ರೈತರಿಗೆ ಸಾಥ್ ನೀಡಿದರು. ಬಾಗಲಕೋಟೆ-ನಿಪ್ಪಾಣಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಯುತ್ತಿದ್ದು, 1 ಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿಗೆ ರೈತರು ಒತ್ತಾಯಿಸಿದ್ರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸರ್ಕಾರದ ವಿರುದ್ಧ ಕಿಡಿಕಾರಿದ್ರು.
ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಭೀಕರ ಮಳೆಯಿಂದ ತೊಂದರೆಗಿಡಾದಾಗ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಯಾರೊಬ್ಬರು ಉತ್ತರ ಕರ್ನಾಟಕ ಪ್ರವಾಸ ಮಾಡಲಿಲ್ಲ. ರೈತರು ಇಂದು ಮತ್ತೆ ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. ಸರ್ಕಾರ ಕಿಂಚಿತ್ತೂ ತಲೆಕಡೆಸಿಕೊಳ್ತಿಲ್ಲ, ಸಂಜೆ ವರೆಗೂ ಸಮಯ ನೀಡಲಾಗುತ್ತೆ. ಸರ್ಕಾರ ಸರಿಯಾಗಿ ಸ್ಪಂದಿಸದಿದ್ದರೆ, ಉಗ್ರ ಹೋರಾಟ ಫಿಕ್ಸ್ ಎಂದ್ರು.
ಇತ್ತ ಸಿ.ಟಿ ರವಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಕಾಂಗ್ರೆಸ್ನವರದ್ದೂ ಇದೆ, ಬಿಜೆಪಿಯವರದ್ದೂ ಇದೆ, ಬೆರಳೆಣಿಕೆ ಮಾಲೀಕರ ಹಿತಾಸಕ್ತಿ ಮುಖ್ಯ ಅಲ್ಲ. ನಮ್ಮ ಧನಿ ಮಾಲೀಕರ ಪರ ಇರಬಾರದು, ರೈತರ ಪರ ಇರಬೇಕು. ರೈತರ ತಾಳ್ಮೆ ಕಟ್ಟೆ ಒಡೆಯುವ ಮುನ್ನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ರೈತರಿಗೂ.. ಮಾಲೀಕರಿಗೂ ಅನ್ಯಾಯವಾಗಬಾರದು
ಇನ್ನು, ಇದೇ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಕಬ್ಬಿಗೆ ಬೆಲೆ ನಿಗದಿ ಮಾಡಿ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ. ಆ ಭಾಗದ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ವಿಶ್ವಾಸ ಇದೆ ಎಂದ್ರು. ಇತ್ತ ಸತೀಶ್ ಜಾರಕಿಹೊಳಿ ಕೂಡ ರಿಯಾಕ್ಟ್ ಮಾಡಿದ್ದು, ಡಿಸಿ ಅವರು ರೈತರ ಜೊತರ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಅವಶ್ಯಕತೆ ಬಿದ್ದರೆ ನಾವು ಹೋಗಿ ಭೇಟಿ ಮಾಡುತ್ತೇವೆ. ನಮ್ಮ ಪರವಾಗಿ ಡಿಸಿ ಅವರು ಭೇಟಿ ಮಾಡುತ್ತಿದ್ದಾರೆ ಎಂದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ರೈತರಿಗೂ ಅನ್ಯಾಯ ಆಗಬಾರದು, ಮಾಲೀಕರಿಗೂ ಅನ್ಯಾಯ ಆಗಬಾರದು, ಈಗಾಗಲೇ ಎರಡು ಬಾರಿ ಮೀಟಿಂಗ್ ಆಗಿವೆ. ನಾನು ಬ್ಯುಸಿ ಇದ್ದ ಕಾರಣ ಮೀಟಿಂಗ್ನಲ್ಲಿ ಇರಲಿಲ್ಲ. ಕಾರ್ಖಾನೆ ಮಾಲೀಕರು, ರೈತರು ಸೇರಿ ಸಭೆ ಮಾಡುತ್ತೇವೆ. ಕುಳಿತು ಸಮಸ್ಯೆ ಬಗ್ಗೆ ಚರ್ಚಿಸಿ. ಪರಿಹಾರಕ್ಕೆ ಪ್ಲಾನ್ ರೂಪಿಸಲಾಗುವುದು ಎಂದ್ರು.