ಸುಧಾಮೂರ್ತಿ ಅವರಿಗೂ ಸೈಬರ್ ವಂಚಕರ ಕಾಟ: 48 ಗಂಟೆಗಳಲ್ಲಿ ನಂಬರ್ ಬ್ಲಾಕ್ ಮಾಡುವುದಾಗಿ ಬೆದರಿಕೆ

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್‌ನ ಮುಖ್ಯಸ್ಥೆ, ರಾಜ್ಯಸಭಾ ಸದಸ್ಯೆ ಡಾ. ಸುಧಾಮೂರ್ತಿ (Sudha Murthy) ಅವರಿಗೆ ಸೈಬರ್ ಕಳ್ಳರು ವಂಚನೆಗೆ ಯತ್ನಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

ಸ್ವತ: ಸುಧಾಮೂರ್ತಿ ಅವರೇ ಈ ವಿಚಾರವನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದು ಸೈಬರ್ ಕಳ್ಳರ (Cyber Crime) ವಿರುದ್ಧ ದೂರು ನೀಡುವಂತೆ ಮನವಿ ಮಾಡಿದ್ದಾರೆ.
ಸುಧಾಮೂರ್ತಿ ಹೇಳಿದ್ದೇನು?
ಕಳೆದ ಸೆ.5ರಂದು ಓಣಂ ಹಬ್ಬದ ದಿನ ನನಗೆ ಪೋನ್ ಕರೆಬಂತು. ನಾನು ದೂರಸಂಪರ್ಕ ಸಚಿವಾಲಯದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಈ ಹಿಂದೆ ಇಲಾಖೆಯವರು ಅನ್ಯ ಕಾರಣಕ್ಕಾಗಿ ನನ್ನನ್ನು ಸಂಪರ್ಕಿಸಿದ್ದರು. ಹೀಗಾಗಿ ಮತ್ತೆ ಅವರೇ ಕರೆ ಮಾಡಿರಬಹುದು ಎಂದು ನಾನು ಭಾವಿಸಿದ್ದೆ.
ನಿಮ್ಮ ನಂಬರ್ ಇದೇನಾ ಮೇಡಂ ಎಂದು ಹುಡುಗ ಕೇಳಿದ. ನಂತರ ಈ ಸಂಖ್ಯೆಯಿಂದ ಆಶ್ಲೀಲ ವಿಡಿಯೋಗಳು ಬರುತ್ತಿವೆ. 2 ಗಂಟೆಗಳಲ್ಲಿ ಮೊಬೈಲ್ ನಂಬರ್ ನಿಷ್ಕ್ರಿಯ ಮಾಡುತ್ತೇನೆ ಎಂದಿದ್ದ. ನನಗೆ ಆಶ್ವರ್ಯವಾಗಿ ಮೊದಲಿಗೆ ನನ್ನ ಬಳಿ ಆಶ್ಲೀಲ ವಿಡಿಯೋಗಳಿಲ್ಲ. ಹೀಗಿದ್ದರೂ ನನ್ನ ನಂಬರ್ ಯಾಕೆ ಬ್ಲಾಕ್ ಮಾಡುತ್ತಾರೆ ಎಂದುಕೊಂಡೆ.
ಈ ವೇಳೆ ಜನವರಿಯಲ್ಲಿ ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ಯಾ ಅಂತ ಪ್ರಶ್ನಿಸಿದ? ಅಷ್ಟೊತ್ತಿಗಾಗಲೇ ನನ್ನ ಸಹಾಯಕಿ ಬಂದು ಕರೆ ಕಟ್ ಮಾಡಿ ಎಂದರು. ಈ ವೇಳೆ ಕರೆ ಮಾಡಿದ ವ್ಯಕ್ತಿಯು ದೂರಸಂಪರ್ಕ ಇಲಾಖೆಯು ಪಿಎರ್‌ಒ ಎಂದು ಹೇಳಿದ. ಪರಿಶೀಲಿಸಿದಾಗ ಇದು ಸೈಬರ್ ವಂಚಕರ ವಂಚನೆ ಜಾಲ ಎನ್ನುವುದು ನನಗೆ ತಿಳಿಯಿತು.
ಸೈಬರ್ ವಂಚಕರು ಅಧಿಕಾರಿ ಸೋಗಿನಲ್ಲಿ ವಂಚಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಅಪರಿಚಿತ ಕರೆ ಮಾಡಿದರೆ ಆತನ ಮಾತಿನ ದಾಟಿ ತಿಳಿದುಕೊಳ್ಳಿ. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಅರೆಸ್ಟ್ ವಾರೆಂಟ್ ಅಂತಾರೆ. ಅನುಮಾನಸ್ಪಾದ ಕರೆ ಬಂದರೆ ಕೂಡಲೇ 1930ಗೆ ಕರೆ ಮಾಡಿ, ಪೊಲೀಸರನ್ನು ಸಂಪರ್ಕಿಸಿ ನಿಮ್ಮ ಹಣವನ್ನ ಉಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
