ರೈತರ ಜಾತ್ರೆಗೆ ಯಶಸ್ವಿ ತೆರೆ: ಧಾರವಾಡ ಕೃಷಿ ಮೇಳದಲ್ಲಿ ದಾಖಲೆ ಸಂಖ್ಯೆಯಲ್ಲಿ ರೈತರು ಭಾಗಿ

ಧಾರವಾಡ: ಜನ.. ಮಹಾಜನ.. ಜನಸ್ತೋಮ…, ಮಳಿಗೆ ಸಾಲಿನಲ್ಲೂ ಜನ, ಫಲಪುಷ್ಪ ಪ್ರದರ್ಶನದಲ್ಲೂ ಜನವೋ ಜನ. ಉತ್ತರ ಕರ್ನಾಟಕ ರೈತರ ಜಾತ್ರೆ ಎಂದೇ ಹೆಸರು ಪಡೆದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ-2025ಕ್ಕೆ ಮಂಗಳವಾರ ಅಧಿಕೃತವಾಗಿ ತೆರೆ ಬಿದ್ದಿದೆ.

ಸೆ.13ರಿಂದ ಸೆ.16ರ ವರೆಗೆ ನಡೆದ ಕೃಷಿ ಮೇಳದಲ್ಲಿ ಕಿತ್ತೂರು ಕರ್ನಾಟಕ ಮಾತ್ರವಲ್ಲ, ಕಲ್ಯಾಣ ಕರ್ನಾಟಕದಿಂದಲೂ ರೈತರು ಬಂದು ಕೃಷಿಗೆ ಸಂಬಂಧಪಟ್ಟ ಸಂಶೋಧನೆ ಮತ್ತು ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದ್ದು ದಾಖಲಾಗಿದೆ.
ಮೊದಲ ದಿನ ಕೀಟ ಪ್ರಪಂಚ ಮತ್ತು ಫಲಪುಷ್ಪ ಪ್ರದರ್ಶನದ ವೈಭವವನ್ನು ಜನ ಕಣ್ತುಂಬಿಕೊಂಡರು.
ಎರಡನೇ ದಿನ ರವಿವಾರ ನೌಕರಿ ಜನ, ಸೋಮವಾರ ಅನ್ನದಾತರು ಮತ್ತು ಮಂಗಳವಾರ ವಿದ್ಯಾರ್ಥಿಗಳ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಭೇಟಿ ಕೊಟ್ಟಿದ್ದು ವಿಶೇಷ. ಅಕ್ಕಪಕ್ಕದ ಜಿಲ್ಲೆಗಳಿಂದ ಕೃಷಿ ಪ್ರವಾಸ ಎಂದು ಫಲಕ ಹಾಕಿಕೊಂಡು ಲಕ್ಷಾಂತರ ಅನ್ನದಾತರು, ಸ್ವಯಂ ಸೇವಾ ಸಂಘಟನೆಗಳು, ಮಹಿಳಾ ಸ್ವ ಸಹಾಯ ಸಂಘಟನೆಗಳ ಸದಸ್ಯರು ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದರು.
ಈ ವರ್ಷವೂ ಜನವೋ ಜನ
2024 ರಲ್ಲಿ 21 ಲಕ್ಷದಷ್ಟು ಜನರನ್ನು ತನ್ನತ್ತ ಸೆಳೆದ ಧಾರವಾಡ ಕೃಷಿ ಮೇಳವು ಈ ವರ್ಷ ಕೂಡ 23.46 ಲಕ್ಷ ಕ್ಕೂ ಅಧಿಕ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಅಷ್ಟೇಯಲ್ಲದೆ, ಪಕ್ಕದ ಗೋವಾ, ಮಹಾರಾಷ್ಟ್ರ, ತೆಲಂಗಾಣದಿಂದಲೂ ರೈತರು, ಕೃಷಿ ತಂತ್ರಜ್ಞರು ಮತ್ತು ಸಂಶೋಧಕರು ಕೃಷಿ ಮೇಳಕ್ಕೆ ಭೇಟಿ ಕೊಟ್ಟು ಹೋಗಿದ್ದು ವಿಶೇಷ.
ಜಾತ್ರೆ ಮಾರುಕಟ್ಟೆ: ಕೃಷಿ ಮೇಳದ ಸ್ವರೂಪದಲ್ಲಿ ಬದಲಾವಣೆ ಆಗುತ್ತಲೇ ಸಾಗಿದ್ದು, ಕೊನೆಯ ದಿನವಂತೂ ಇಡೀ ಕೃಷಿ ಮೇಳವು ಮಾರುಕಟ್ಟೆಯಾಗಿ ಮಾರ್ಪಾಟಾಗಿತ್ತು. ಉತ್ತರ ಭಾರತದಿಂದ ಆಟಿಕೆಗಳನ್ನು ಮಾರಾಟ ಮಾಡುವ ಸಾವಿರಾರು ಸಣ್ಣ ವ್ಯಾಪಾರಿಗಳು ಕೃಷಿ ವಿವಿಯ ಎಲ್ಲಾ ರಸ್ತೆಗಳಿಗೂ ಲಗ್ಗೆ ಹಾಕಿದ್ದರು. ಕೃಷಿ ಪರಿಕರಗಳ ಮಾರಾಟ ಒಂದೆಡೆಯಾದರೆ, ಜೀವನಾವಶ್ಯಕ ವಸ್ತುಗಳ ಮಾರಾಟವೂ ಅತ್ಯಂತ ಭರದಿಂದ ಸಾಗಿದ ದೃಶ್ಯ ಕಂಡು ಬಂದಿತು.
ಕರಿ ಕಂಬಳಿ, ಹಸಿ ಪೇರಲು: ಕೃಷಿ ಮೇಳದ ಮಳಿಗೆ ಸಾಲಿನಲ್ಲಿ ವಿಶ್ವವಿದ್ಯಾಲಯ ನಿಗದಿ ಪಡೆಸಿದ ಮಳಿಗೆಗಳಲ್ಲಿ ಮಾರಾಟ ಮಳಿಗೆಗಳಲ್ಲಿಯೂ ಭರ್ಜರಿ ವ್ಯಾಪಾರ ನಡೆದಿದೆ. ಅದರಂತೆ ರಸ್ತೆ ಬದಿಯಲ್ಲಿ ಪ್ರತಿವರ್ಷದಂತೆ ಕರಿ ಕಂಬಳಿ ಮಾರಾಟ ಮಾಡುವವರಿಂದ ಹಿಡಿದು, ಪೇರಲ ಹಣ್ಣು, ತಂಪು ಪಾನೀಯ, ನೀರು, ಕಡಲೆ,ಶೇಂಗಾ ಮಾರಾಟ ಮಾಡುವ ದೃಶ್ಯ ಕೂಡ ಕಂಡು ಬಂದಿತು.
ಡಿಜಿಟಲ್ ಪಾವತಿಗೆ ಪರದಾಟ
ಕೃಷಿಮೇಳದಲ್ಲಿ 500 ಕ್ಕೂ ಅಧಿಕ ಮಳೆಗೆ ಹಾಕಲಾಗಿತ್ತು. ಈ ಪೈಕಿ 350 ಕ್ಕೂ ಅಧಿಕ ಮಳಿಗೆಗಳ ವಾಣಿಜ್ಯ ಮಳಿಗೆಗಳಾಗಿದ್ದವು. ಇಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿರುತ್ತದೆ. ಕಳೆದ ಮೂರ್‍ನಾಲ್ಕು ವರ್ಷದಿಂದಲೂ ಡಿಜಿಟಲ್ ರೂಪದಲ್ಲಿ ಹಣ ನೀಡಿ ವಸ್ತುಗಳನ್ನು ಖರೀದಿಸುವವರಿಗೆ ನೆಟ್‌ವರ್ಕ್ ತೊಂದರೆ ಮುಂದುವರೆದಿದೆ. ಕೃಷಿಮೇಳದಲ್ಲಿ ಲಕ್ಷ ಲಕ್ಷ ಜನ ಸೇರುವುದರಿಂದ ಮೊಬಲ್‌ಗಳು ಜಾಮ್ ಆಗುತ್ತಿವೆ. ಹೀಗಾಗಿ ಡಿಜಿಟಲ್ ಪಾವತಿ ಕಷ್ಟವಾಗುತ್ತಿದೆ. ಮುಂದಿನ ವರ್ಷವಾದರೂ ಕೃಷಿ ವಿವಿ ಉಚಿತ ವೈಪೈ ವ್ಯವಸ್ಥೆ ಮಾಡಬೇಕು ಎನ್ನುತ್ತಿದ್ದಾರೆ ಹೈಟೆಕ್ ಅನ್ನದಾತರು.
23 ಲಕ್ಷ ಜನ ಭೇಟಿ ಕೊಟ್ಟಿದ್ದು ಹರ್ಷ ತಂದಿದೆ. ಕೃಷಿ ಪರಂಪರೆಯ ಕೊಮಡಿಯಾಗಿ ಕೃಷಿ ವಿವಿ ಕೆಲಸ ಮಾಡುತ್ತಿದ್ದು, ಇದಕ್ಕೆ ಸಹಕರಿಸಿದ ಅಬ್ನದಾತರಿಗೆ ಅಭಿನಂದನೆಗಳು. -ಡಾ.ಪಿ.ಎಲ್.ಪಾಟೀಲ, ಕುಲಪತಿ,ದಾರವಾಡ ಕೃಷಿ ವಿವಿ.
