Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೌಶಲ್ಯಾಧಾರಿತ ವಿಷಯ ಆಯ್ಕೆ ಮಾಡಿದ ವಿದ್ಯಾರ್ಥಿಗಳು ಸಂಕಟದಲ್ಲಿ: ಪುಸ್ತಕ, ಶಿಕ್ಷಕರಿಲ್ಲ!

Spread the love

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತೃತೀಯ ಭಾಷೆ ಹಿಂದಿ ಬದಲು ಕೌಶಲ್ಯಾಧಾರಿತ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರುವ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಈವರೆಗೂ ಪಠ್ಯಪುಸ್ತಕಗಳಾಗಲಿ, ಈ ವಿಷಯಗಳ ಬೋಧಕರಾಗಲಿ ದೊರಕಿಲ್ಲ.

ಹೋಗಲಿ ಮತ್ತೆ ಹಿಂದಿಯನ್ನೇ ಆಯ್ಕೆ ಮಾಡಿಕೊಂಡು ಕಲಿಯೋಣ ಎಂದರೆ ಅದಕ್ಕೂ ಈಗ ಅವಕಾಶವಿಲ್ಲ. ಇದು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಗೆ ತಂದೊಡ್ಡಿದೆ. ಏಕೆಂದರೆ 9ನೇ ತರಗತಿಯಲ್ಲಿ ಈ ವಿದ್ಯಾರ್ಥಿಗಳು ಕೌಶಲ್ಯಾಧಾರಿತ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಅವರು 10ನೇ ತರಗತಿಯಲ್ಲೂ ಅದೇ ವಿಷಯಗಳನ್ನು ಕಲಿತು ಪರೀಕ್ಷೆ ಬರೆಯಬೇಕಿದೆ.

ಸರ್ಕಾರ ಶಾಲಾ ಹಂತದಲ್ಲೇ ಮಕ್ಕಳಿಗೆ ಕೌಶಲ್ಯ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಕೆಲವು ವರ್ಷಗಳಿಂದ ಪ್ರೌಢ ಶಾಲಾ ಹಂತದಲ್ಲಿ 9 ಮತ್ತು 10ನೇ ತರಗತಿಗೆ ತೃತೀಯ ಭಾಷೆ ಹಿಂದಿ ಬದಲು ಮಾಹಿತಿ ತಂತ್ರಜ್ಞಾನ(ಐಟಿ), ರೀಟೇಲ್‌, ಆಟೋಮೊಬೈಲ್‌, ಹೆಲ್ತ್‌ ಕೇರ್‌, ಬ್ಯೂಟಿ ಆಯಂಡ್‌ ವೆಲ್‌ನೆಸ್‌ ಸೇರಿ ಏಳು ವಿಷಯಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಇದುವರೆಗೆ ಕರ್ನಾಟಕ ಪಠ್ಯಪುಸ್ತಕ ಸಂಘ ಈ ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳಿಗೆ ತಲುಪಿಸಿಲ್ಲ ಎಂಬ ಆರೋಪ ಶಿಕ್ಷಕರಿಂದಲೇ ಕೇಳಿಬಂದಿದೆ.

ಕಾಯಂ ಶಿಕ್ಷಕರಿಲ್ಲ: ಮತ್ತೊಂದೆಡೆ ಈ ವಿಷಯಗಳ ಬೋಧನೆಗೆ ಕಾಯಂ ಶಿಕ್ಷಕರ ಸರ್ಕಾರ ನೇಮಕ ಮಾಡಿಕೊಂಡಿಲ್ಲ. ಅತಿಥಿ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಬೇಕಿದೆ. ಈ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಮುಖ್ಯಶಿಕ್ಷಕರಿಗೆ ನೀಡಿಲ್ಲ. ಬದಲಿಗೆ ಸರ್ಕಾರವೇ ನೇಮಕ ಮಾಡಿ ಕಳುಹಿಸುವುದಾಗಿ ಹೇಳಿದೆ ಎಂದು ಬೆಂಗಳೂರು, ತುಮಕೂರು, ಮಂಡ್ಯ ಸೇರಿ ವಿವಿಧ ಜಿಲ್ಲೆಗಳ ಕೆಲ ಶಾಲಾ ಶಿಕ್ಷಕರು ಹೇಳುತ್ತಿದ್ದಾರೆ. ಇನ್ನು, ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೂಲಕ ಈ ಅತಿಥಿ ಶಿಕ್ಷಕರ ನೇಮಕ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕೊಪ್ಪಳ, ಬೀದರ್‌, ಕಲಬುರಗಿ, ರಾಯಚೂರು ಮತ್ತಿತರ ಜಿಲ್ಲೆಗಳ ಶಾಲಾ ಶಿಕ್ಷಕರ ಹೇಳಿಕೆಯಾಗಿದೆ. ಇದರಿಂದ ಆ ವಿಷಯಗಳ ಬೋಧನೆಗೆ ಅತಿಥಿ ಶಿಕ್ಷಕರೂ ಇಲ್ಲದೆ ಮಕ್ಕಳು ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ.

ಶಿಕ್ಷಕರ ವಿರುದ್ಧ ಮಕ್ಕಳ ಬೇಸರ: ಸರ್ಕಾರ ಹೇಳಿತೆಂದು ಕಳೆದ ವರ್ಷ ತಮ್ಮ ಶಾಲೆಯ ಕೆಲ ಮಕ್ಕಳಿಗೆ ಹಿಂದಿ ಬದಲು ಕೌಶಲ್ಯ ಆಧಾರಿತ ವಿಷಯಗಳ ಆಯ್ಕೆ ಮಾಡಿಕೊಳ್ಳುವಂತೆ ನಾವೇ ಪ್ರೇರೇಪಿದ್ದೆವು. ಕಳೆದ ವರ್ಷ 9ನೇ ತರಗತಿಯಲ್ಲೂ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ, ಅತಿಥಿ ಶಿಕ್ಷಕರು ಸಿಗಲಿಲ್ಲ. ಆದರೂ ಆ ಮಕ್ಕಳನ್ನು ಕಡ್ಡಾಯ ತೇರ್ಗಡೆ ಮಾಡುವಂತೆ ಶಿಕ್ಷಣ ಇಲಾಖೆಯಿಂದ ಮೌಖಿಕ ಸೂಚನೆ ಬಂದಿತ್ತು. ಆದರೆ, ಈ ವರ್ಷ ಆ ಮಕ್ಕಳು 10ನೇ ತರಗತಿಯಲ್ಲಿದ್ದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದೆ. ಜು.24ರಿಂದ ಆ ಮಕ್ಕಳಿಗೆ ಮೊದಲ ಕಿರು ಪರೀಕ್ಷೆ (ಎಫ್‌ಎ-1) ನಡೆಸಬೇಕಿದೆ. ಆದರೆ, ಇನ್ನೂ ಪುಸ್ತಕ, ಅತಿಥಿ ಶಿಕ್ಷಕರು ಇಲ್ಲದ ಕಾರಣ ಆ ಮಕ್ಕಳು ನಮ್ಮನ್ನು ಪ್ರಶ್ನಿಸುತ್ತಿದ್ದು, ನೀವು ಹೇಳಿದ್ದಕ್ಕೆ ಈ ವಿಷಯ ಆಯ್ಕೆ ಮಾಡಿಕೊಂಡೆವು. ಈಗ ನಮ್ಮ ಸ್ಥಿತಿ ಅತಂತ್ರವಾಗಿದೆ ಎಂದು ನಮ್ಮ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿವಿಧ ಶಾಲಾ ಶಿಕ್ಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದು ಸಿಬಿಎಸ್‌ಇ ಮಾದರಿ: ಕೇಂದ್ರೀಯ ಪಠ್ಯಕ್ರಮ ಸಿಬಿಎಸ್‌ಇಯಲ್ಲೂ 9 ಮತ್ತು 10ನೇ ತರಗತಿ ಮಕ್ಕಳಿಗೆ ಕೌಶಲ್ಯಾಧಾರಿತ ವಿಷಯಗಳ ಆಯ್ಕೆಗೆ ಅವಕಾಶವಿದೆ. ಆದರೆ, ಅಲ್ಲಿ ಮಕ್ಕಳು ತೃತೀಯ ಭಾಷೆಯನ್ನೂ ಓದಿ ಪರೀಕ್ಷೆ ಬರೆಯುತ್ತಾರೆ. ಜೊತೆಗೆ ಕೌಶಲ್ಯಾಧಾರಿತ ವಿಷಯಕ್ಕೂ ಪರೀಕ್ಷೆ ಬರೆಯುತ್ತಾರೆ. ಆದರೆ, ಫಲಿತಾಂಶ ನೀಡುವಾಗ ಒಂದು ವೇಳೆ ತೃತೀಯ ಭಾಷೆಯಲ್ಲಿ ಪಾಸಾಗದೆ ಕೌಶಲ್ಯಾಧಾರಿತ ವಿಷಯದಲ್ಲಿ ಪಾಸಾಗಿದ್ದರೂ 10ನೇ ತರಗತಿ ತೇರ್ಗಡೆ ಎಂದು ಪರಿಗಣಿಸಲಾಗುತ್ತದೆ. ಆದರೆ, ರಾಜ್ಯದಲ್ಲಿ ಈ ಮಾದರಿ ಇಲ್ಲ. ತೃತೀಯ ಭಾಷೆಗೆ ಬದಲಾಗಿ ಕೌಶಲ್ಯಾಧಾರಿತ ವಿಷಯವನ್ನೇ ಓದಿ ಪರೀಕ್ಷೆ ಬರೆಯಬೇಕು.


Spread the love
Share:

administrator

Leave a Reply

Your email address will not be published. Required fields are marked *