ಬಿರುಗಾಳಿಯಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕ: ಇಂಡಿಗೋ ವಿಮಾನ ಗಿರಕಿಹೋಗಿ ಸುರಕ್ಷಿತ ಲ್ಯಾಂಡ್

ನವದೆಹಲಿ: ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಬೀಸಿದ್ದರಿಂದ ಇಂಡಿಗೋ ವಿಮಾನ ತೀವ್ರ ಪ್ರಕ್ಷುಬ್ಧತೆ ಅನುಭವಿಸಿದ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ರಾಯ್ಪುರ್ನಿಂದ ಬಂದ 6E 6313 ವಿಮಾನವು ದೆಹಲಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಈ ವೇಳೆ ಗಾಳಿ 80 ಕಿ.ಮೀ ವೇಗದಲ್ಲಿ ಬೀಸಿದೆ. ಇದರಿಂದ ಪ್ರಕ್ಷುಬ್ಧತೆ ಉಂಟಾಗಿದೆ. ತಕ್ಷಣ ಎಚ್ಚೆತ್ತ ಪೈಲಟ್, ವಿಮಾನವನ್ನು ಲ್ಯಾಂಡ್ ಮಾಡದೇ, ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಬಳಿಕ 38 ನಿಮಿಷಗಳ ಕಾಲ ಆಕಾಶದಲ್ಲೇ ಗಿರಕಿ ಹೊಡೆಸಿ, ವಾತಾವರಣ ತಿಳಿಯಾದ ಬಳಿಕ ಲ್ಯಾಂಡ್ ಮಾಡಿದ್ದಾರೆ. ವಿಮಾನವು ಸಂಜೆ 5:05ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಸಂಜೆ 5:43 ಕ್ಕೆ ಲ್ಯಾಂಡ್ ಆಯಿತು.
ಗಾಳಿಗೆ ಸಿಕ್ಕ ವಿಮಾನ ತೀವ್ರವಾಗಿ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಕಿರುಚಾಡಿದ್ದಾರೆ. ಈ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ ಹವಾಮಾನ ಹಠಾತ್ ಬದಲು!
ಇಂದು ಮುಂಜಾನೆ, ದೆಹಲಿ-ಎನ್ಸಿಆರ್ನಲ್ಲಿ ಬಲವಾದ ಗಾಳಿ ಇತ್ತು, ಮಧ್ಯಾಹ್ನ ಬಿಸಿಲಿನ ವಾತಾವರಣ ಇತ್ತು. ಸಂಜೆಯ ವೇಳೆಗೆ ಮಳೆ ಹಾಗೂ ಬಿರುಗಾಳಿ ಬೀಸಿದೆ ಎಂದು ವರದಿಯಾಗಿದೆ.
ಮಳೆಯಿಂದಾಗಿ ತಾಪಮಾನದಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ದೆಹಲಿಯ ವಿವಿಧ ಭಾಗಗಳಲ್ಲಿ ತಾಪಮಾನವು 14 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆಯಾಗಿದೆ.