ನಕಲಿ ಎಸ್‌ಸಿ–ಎಸ್‌ಟಿ ಜಾತಿ ಪ್ರಮಾಣಪತ್ರ ಪ್ರಕರಣಗಳ ಕಠಿಣ ಕಾನೂನು ಕ್ರಮಕ್ಕೆ ಸೂಚನೆ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ, ನಕಲಿ ಎಸ್‌ಸಿ ಮತ್ತು ಎಸ್‌ಟಿ ಜಾತಿ ಪ್ರಮಾಣಪತ್ರಗಳ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದರು. ಸಭೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಸ್ವಪಕ್ಷೀಯ ಶಾಸಕರ ವಿರುದ್ಧವೇ ತಿರುಗಿಬಿದ್ದರು. ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಜಾತಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಇದೇ ವಿಚಾರವನ್ನು ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಅವರು ಕೂಡ ಪ್ರಸ್ತಾಪಿಸಿದರು.

ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣದ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ಕೋರ್ಟ್ ಆದೇಶ ಇದೆ. ಅದೇಶ ಜಾರಿ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.
ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ ವಿಚಾರದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 60 ದಿನಗಳೊಳಗಾಗಿ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಕಳೆದ 6 ತಿಂಗಳಿನಲ್ಲಿ ಶೇ.84 ರಷ್ಟು ಮಾತ್ರ ಪ್ರಕರಣಗಳಲ್ಲಿ ನಿಗದಿತ ಅವಧಿಯ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಶೇ.100 ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಕಡ್ಡಾಯವಾಗಿ ಆರೋಪ ಪಟ್ಟಿ ಸಲ್ಲಿಸಬೇಕು. ಪೊಲೀಸರು ಇದರಲ್ಲಿ ಯಾವುದೇ ನೆಪ ಹೇಳಬಾರದು. ನ್ಯಾಯಾಲಯದಲ್ಲಿ 56 ಪ್ರಕರಣಗಳಿಗೆ ತಡೆಯಾಜ್ಞೆ ಇದೆ. ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಹೇಳಿದರು.
2023ರಿಂದ ಕಳೆದ 3 ವರ್ಷಗಳಲ್ಲಿ ಒಟ್ಟು 6635 ಪ್ರಕರಣಗಳು ದಾಖಲಾಗಿವೆ. 4912 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. 4149 ಪ್ರಕರಣಗಳಲ್ಲಿ ಮಾತ್ರ 60 ದಿನಗಳ ಒಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ನೋಂದಣಿಯಾದ ಒಟ್ಟು ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ 63% ಪ್ರಕರಣಗಳಲ್ಲಿ ಮಾತ್ರ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿರುತ್ತದೆ. 36 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ತನಿಖಾ ಹಂತದಲ್ಲಿ ಸುಮಾರು 679 ಪ್ರಕರಣಗಳಿವೆ. ಈ ಹಿಂದೆ ನಡೆದಿರುವ ಪ್ರಕರಣಗಳ ಸ್ಥಿತಿ ಗತಿ ಏನು? ಆಯಾ ವರ್ಷಗಳಲ್ಲಿ ನಡೆದಿರುವ ಪ್ರಕರಣಗಳ ನಿಖರ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
