ಖಾದ್ಯ ತೈಲ ದರ ಇಳಿಸದಿದ್ದರೆ ಕಠಿಣ ಕ್ರಮ: ಕಂಪನಿಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ

ನವದೆಹಲಿ: ಖಾದ್ಯ ತೈಲ ದರ ( cooking oil price ) ಇಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಂಪನಿಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಚಿಲ್ಲರೆ ದರವನ್ನು ಕಡಿಮೆ ಮಾಡಿ ಗ್ರಾಹಕರ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಖಾದ್ಯ ತೈಲದ ಆಮದು ಸುಂಕವನ್ನು ಶೇಕಡಾ.20ರಿಂದ ಶೇಕಡಾ.10ಕ್ಕೆ ಇಳಿಕೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಇದರ ಲಾಭ ಗ್ರಾಹಕರಿಗೆ ತಲುಪಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ದೇಶದ ಪ್ರಮುಖ ಖಾದ್ಯ ಸಂಸ್ಕರಣೆ ಘಟಕಗಳ ತಪಾಸಣೆ ಆರಂಭಿಸಿದೆ.
ಈ ಬೆನ್ನಲ್ಲೇ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ತಂಡಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.

ಆಮದು ಸುಂಕ ಕಡಿತದ ನಂತರ ಸೂರ್ಯಕಾಂತಿ, ಸೋಯಾಬಿನ್, ತಾಳೆ ಎಣ್ಣೆಯಂತಹ ಸಂಸ್ಕರಿಸಿದ ಎಣ್ಣೆಗಳಿಗೆ ಗರಿಷ್ಠ ಚಿಲ್ಲರೆ ದರ, ವಿತರಕರಿಗೆ ಬೆಲೆ ಕಡಿಮೆ ಮಾಡಲು ಕಾರಣವಾಗಿದೆಯೇ ಎನ್ನುವುದರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇನ್ನು ಖಾದ್ಯ ತೈಲ ಕಂಪನಿಗಳು ಚಿಲ್ಲರೆ ಮತ್ತು ಸರಬರಾಜು ಮಟ್ಟದಲ್ಲಿ ಬೆಲೆ ಇಳಿಕೆ ಮಾಡಿರುವುದನ್ನು ದೃಢಪಡಿಸಿವೆ. ಸುಂಕ ಇಳಿಕೆಯಿಂದ ವೆಚ್ಚದ ಸಾಗಣೆ ಕಡಿಮೆಯಾಗಿದೆ.
ಈ ಮೂಲಕ ಗಗನಕ್ಕೇರಿದ್ದ ಖಾದ್ಯ ತೈಲ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಅನೇಕ ಕ್ರಮ ಕೈಗೊಂಡಿದ್ದು, ಆಮದು ಸುಂಕವನ್ನು ಇಳಿಕೆ ಮಾಡಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಮುಂದಾಗಿದೆ.
