ರಾಜಸ್ಥಾನದಲ್ಲಿ ವಿಚಿತ್ರ ಸಂಪ್ರದಾಯ: ಮದುವೆಯಾಗದ ಹುಡುಗರಿಗೆ ಕೋಲಿನ ಏಟು, ಈ ಏಟು ಬಿದ್ದರೆ ಶೀಘ್ರ ವಿವಾಹ ಖಚಿತವಂತೆ!

ರಾಜಸ್ಥಾನ: ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ ಅನ್ನೋ ಗೋಳು ಹುಡುಗರದ್ದು. ಒಂದು ವೇಳೆ ಹುಡುಗಿ ಸಿಕ್ಕಿದ್ರು ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಗ್ಯಾರಂಟಿ. ಆದರೆ ಮದ್ವೆ ಆಗದ ಹುಡುಗರು ಈ ಹಬ್ಬದಲ್ಲಿ ಭಾಗಿಯಾದ್ರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯಂತೆ.

ರಾಜಸ್ಥಾನದ ಜೋಧ್‌ಪುರದಲ್ಲಿ ನಡೆಯುವ ಈ ದಿಂಗಾ ಗವರ್ ಹಬ್ಬವು ವಿಶೇಷತೆಯಿಂದ ಗಮನ ಸೆಳೆದಿದೆ. ಹಬ್ಬದ ಪ್ರಮುಖ ಆಕರ್ಷಣೆ ಎಂದರೆ ಹದಿನಾರನೇ ದಿನ ನಡೆಯುವ ಮೆರವಣಿಗೆ.ಈ ದಿನ ಮಹಿಳೆಯರು ಮದುವೆಯಾಗದ ಯುವಕರಿಗೆ ಕೋಲಿನಿಂದ ಹೊಡೆಯುತ್ತಾರೆ. ಇದುವೇ ಈ ಸಮಸ್ಯೆಗೆ ಪರಿಹಾರವಂತೆ. ಈ ವಿಶಿಷ್ಟ ಆಚರಣೆಯ ವಿಡಿಯೋ ವೈರಲ್ ಆಗುತ್ತಿದೆ.
ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದ ಶೀರ್ಷಿಕೆಯಲ್ಲಿ ಮದುವೆಯಾಗಲು ಕಷ್ಟಪಡುತ್ತಿರುವ ಪುರುಷರಿಗೆ ಇಲ್ಲಿದೆ ಒಂದು ಪರಿಹಾರ. ಜೋಧಪುರದ ದಿಂಗಾ ಗವರ್ ಮೇಳವು ಒಂದು ವಿಶಿಷ್ಟ ಸಾಂಸ್ಕೃತಿಕ ಹಬ್ಬವಾಗಿದ್ದು, ಇಲ್ಲಿ ಮಹಿಳೆಯರು ಗವರ್ ಮಾತೆಯನ್ನು ಪೂಜಿಸುತ್ತಾರೆ. ಈ ಹಬ್ಬದ ಕೊನೆಯ ದಿನ ಗವರ್ ಜಿ ಉಪವಾಸ ಆಚರಿಸುವ ಮಹಿಳೆಯರು ರಾತ್ರಿಯಲ್ಲಿ ಅವಿವಾಹಿತ ಪುರುಷರನ್ನು ಕೋಲಿನಿಂದ ಹೊಡೆಯುತ್ತಾರೆ. ಈ ಪದ್ಧತಿಯು ಅವಿವಾಹಿತ ಪುರುಷರ ತ್ವರಿತ ವಿವಾಹಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ ಎಂದು ಬರೆಯಲಾಗಿದೆ. ಮಹಿಳೆಯರು, ಯುವತಿಯರು ಸೇರಿದಂತೆ ಪುಟಾಣಿಗಳು ಅವಿವಾಹಿತ ಯುವಕರಿಗೆ ಕೋಲಿನಿಂದ ಹೊಡೆಯುವುದನ್ನು ನೋಡಬಹುದು.
ದಿಂಗಾ ಗವರ್ ಹಬ್ಬ?
ರಾಜಸ್ಥಾನದ ಜೋಧಪುರದ ದಿಂಗಾ ಗವರ್ ಹಬ್ಬವು ವಿಶಿಷ್ಟ ಹಬ್ಬವಾಗಿದ್ದು ಇದನ್ನು ಮೋಸದ ಹಬ್ಬವೆಂದು ಕರೆಯಲಾಗುತ್ತದೆ. ಈ ಸಾಂಸ್ಕೃತಿಕ ಹಬ್ಬದಲ್ಲಿ ಮಹಿಳೆಯರು ಗವರ್ ಮಾತೆಯನ್ನು ಪೂಜಿಸುತ್ತಾರೆ. ವಿವಿಧ ವೇಷಭೂಷಣಗಳನ್ನು ಧರಿಸಿ ಕೈಯಲ್ಲಿ ಕೋಲು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಮಹಿಳೆಯರು ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುವ ಯುವಕರನ್ನು ತಮಾಷೆಯಾಗಿ ಕೋಲಿನಿಂದ ಹೊಡೆಯುತ್ತಾರೆ. ಇದು ಅವಿವಾಹಿತ ಪುರುಷರಿಗೆ ಶೀಘ್ರದಲ್ಲೇ ಮದುವೆಯಾಗುವ ಸೂಚನೆ ಎಂದು ನಂಬಲಾಗಿದೆ.