ಮನೆಯಲ್ಲಿದ್ದ ಗೃಹಿಣಿಯಿಂದ ₹700 ಕೋಟಿ ಬ್ರ್ಯಾಂಡ್ ‘ಬೀಬಾ’ ಕಟ್ಟಿ ಬೆಳೆಸಿದ ಕಥೆ

:ಫ್ಯಾಷನ್ ವಿಷಯಕ್ಕೆ ಬಂದಾಗ ನಮ್ಮ ಮನಸ್ಸಿನಲ್ಲಿ ಕೆಲವು ಬ್ರ್ಯಾಂಡ್‌ಗಳು ಥಟ್ ಅಂತ ನೆನಪಿಗೆ ಬರುತ್ತದೆ ಅಲ್ಲವೇ, ಇಂದು ನಾವು ನಿಮಗೆ ಹಲವು ವರ್ಷಗಳ ಹಿಂದೆ ಗೃಹಿಣಿಯೊಬ್ಬರು ಪ್ರಾರಂಭಿಸಿದ ಅಂತಹ ಒಂದು ಪ್ರಸಿದ್ಧ ಬ್ರ್ಯಾಂಡ್‌ನ ಕಥೆಯನ್ನು ಹೇಳಲಿದ್ದೇವೆ.

ಆ ಮಹಿಳೆಯ ಹೆಸರು ಮೀನಾ ಬಿಂದ್ರಾ. ದೆಹಲಿಯಲ್ಲಿ ಹುಟ್ಟಿ ಬೆಳೆದ ಅವರು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ನಲ್ಲಿ ಅಧ್ಯಯನ ಮಾಡಿದರು. ಆದರೆ 20 ನೇ ವಯಸ್ಸಿಗೆ ವಿವಾಹವಾದರು. ನೌಕಾಪಡೆಯಲ್ಲಿದ್ದ ತಮ್ಮ ಪತಿ ಮತ್ತು ಇಬ್ಬರು ಗಂಡು ಮಕ್ಕಳಾದ ಸಂಜಯ್ ಮತ್ತು ಸಿದ್ಧಾರ್ಥ್ ಅವರೊಂದಿಗೆ ಸರಳ ಜೀವನವನ್ನು ನಡೆಸುತ್ತಿದ್ದರು. ಆದರೆ ಅವರಿಗೆ 40 ವರ್ಷ ವಯಸ್ಸಾಗುವ ಹೊತ್ತಿಗೆ ಮಕ್ಕಳು ದೊಡ್ಡವರಾಗಿದ್ದರು. ಹಾಗಾಗಿ ಸಮಯ ಸಿಗುತ್ತಿತ್ತು. ಬಿಡುವು ಸಿಕ್ಕಾಗಲೆಲ್ಲಾ ಅವರು ಏನಾದರೂ ಹೊಸದನ್ನು ಮಾಡಲು ಬಯಸುತ್ತಿದ್ದರು.
1988 ರಲ್ಲಿ ಯಾವುದೇ ಫ್ಯಾಷನ್ ಡಿಸೈನಿಂಗ್ ಶಿಕ್ಷಣ ಅಥವಾ ಅನುಭವವಿಲ್ಲದೆ, ಮೀನಾ ಮನೆಯಿಂದಲೇ ಸರಳವಾದ ಹತ್ತಿ ಸೂಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಆದ್ರೆ ಅವರ ಬಳಿ ಹಣವಿರಲಿಲ್ಲ, ಬ್ಯಾಂಕ್ ಅಕೌಂಟ್ ಇರಲಿಲ್ಲ. ಈ ಸಮಯದಲ್ಲಿ ಗಂಡ ಸಹಾಯ ಮಾಡಿದರು. ಹಾಗಾಗಿ ಬ್ಯಾಂಕಿನಿಂದ 8000 ರೂ. ಸಾಲ ಪಡೆದರು. ಇಲ್ಲಿಂದ ಪ್ರಾರಂಭವಾದದ್ದೇ ಬೀಬಾ(Biba). ಆ ಸಮಯದಲ್ಲಿ ರೆಡಿಮೇಡ್ ಚೂಡಿದಾರ್-ಕುರ್ತಾಗಳು ಹೊಸ ಐಡಿಯಾ ಆಗಿದ್ದವು. ನಿಮಗೆಲ್ಲರಿಗೂ ತಿಳಿದಿರುವಂತೆ ಬಟ್ಟೆಯನ್ನು ಖರೀದಿಸುವುದು ಸುಲಭವಲ್ಲ. ಆದರೆ ಮೀನಾ ಅವರ ಕಠಿಣ ಪರಿಶ್ರಮ ಮತ್ತು ಹೊಸ ವಿನ್ಯಾಸಗಳು ಶೀಘ್ರದಲ್ಲೇ ಅವರನ್ನು ಜನರ ಗಮನಕ್ಕೆ ತಂದವು. ಅವರ ಉಡುಪುಗಳು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಇಷ್ಟವಾಗಿದ್ದವು ಮತ್ತು ಅವರು ರಾತ್ರೋರಾತ್ರಿ ಪ್ರಸಿದ್ಧರಾದರು.
ಯಶಸ್ಸಿನ ರಹಸ್ಯಗಳಿವು…
ಮುಂಬೈನ ಪ್ರಸಿದ್ಧ ಅಂಗಡಿ ಬೆಂಜರ್ ಮೀನಾಗೆ ದೊಡ್ಡ ಅವಕಾಶವನ್ನು ನೀಡಿತು. ಅವರ ಡಿಸೈನ್ಸ್ ಮಾರಾಟ ಆಗಲು ಪ್ರಾರಂಭಿಸಿದವು. ಬೀಬಾ ಕ್ರಮೇಣ ಪ್ರಗತಿ ಸಾಧಿಸಿ ಇಂದು 76 ನಗರಗಳಲ್ಲಿ 180 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ ಮತ್ತು ಬೀಬಾ ಬಟ್ಟೆಗಳು 275 ಮಲ್ಟಿ-ಬ್ರಾಂಡ್ ಅಂಗಡಿಗಳಲ್ಲಿ ಲಭ್ಯವಿದೆ. 2004 ರಲ್ಲಿ, ಬೀಬಾ ಮುಂಬೈನ ಮಾಲ್‌ನಲ್ಲಿ ತನ್ನ ಮೊದಲ ಅಂಗಡಿಯನ್ನು ತೆರೆಯಿತು. 2012 ರ ಹೊತ್ತಿಗೆ, ಅದರ ಆದಾಯವು 300 ಕೋಟಿ ರೂ.ಗಳನ್ನು ತಲುಪಿತು ಮತ್ತು 2020 ರಲ್ಲಿ ಅದು 600 ಕೋಟಿ ರೂ.ಗಳ ಬ್ರ್ಯಾಂಡ್ ಆಗಿ ಮಾರ್ಪಟ್ಟಿತು. ಇಂದು, ಬೀಬಾದ ವಾರ್ಷಿಕ ಆದಾಯವು ಸುಮಾರು 700 ಕೋಟಿ ರೂ.ಗಳಷ್ಟಿದೆ. ಉತ್ತಮ ಗುಣಮಟ್ಟ, ಸರಿಯಾದ ಬೆಲೆ ಮತ್ತು ಸಕಾಲಿಕ ವಿತರಣೆಯು ಅವರ ಯಶಸ್ಸಿನ ರಹಸ್ಯಗಳು ಎಂದು ಮೀನಾ ಹೇಳುತ್ತಾರೆ.
ಬಾಲಿವುಡ್‌ನಲ್ಲೂ ಛಾಪು ಮೂಡಿಸಿದ ಬೀಬಾ
ಬಾಲಿವುಡ್‌ನಲ್ಲೂ ಬೀಬಾ ತನ್ನದೇ ಆದ ಛಾಪು ಮೂಡಿಸಿದೆ. 2004 ರಲ್ಲಿ, ‘ನಾ ತುಮ್ ಜಾನೋ ನಾ ಹಮ್’, ‘ಹಲ್ಚುಲ್’ ಮತ್ತು ‘ಬಾಗ್ಬನ್’ ನಂತಹ ಚಿತ್ರಗಳಿಗೆ ಬಟ್ಟೆಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿತು. ಈ ಚಿತ್ರಗಳಲ್ಲಿ ಬೀಬಾ ಅವರ ಬ್ರ್ಯಾಂಡ್ ಹೆಚ್ಚು ಫೇಮಸ್ ಆದವು. 2015 ರಲ್ಲಿ, ಬೀಬಾ Best Women’s Ethnic Wear Brand ಪ್ರಶಸ್ತಿ ಪಡೆಯಿತು ಮತ್ತು ಮೀನಾ ಅವರಿಗೆ ಭಾರತದ ಉಡುಪು ತಯಾರಕರ ಸಂಘ (CMAI) Apex Lifetime Achievement Award ನೀಡಿ ಗೌರವಿಸಿತು. ಮೀನಾ ಇನ್ನೂ ಬೀಬಾ ಡಿಸೈನ್ ಮಾಡುವಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಯೊಂದು ಬಟ್ಟೆಯನ್ನು ಸುಂದರವಾಗಿ ಮತ್ತು ಯೋಗ್ಯವಾಗಿಡಲು ಅವರು ಸ್ವತಃ ಪರಿಶೀಲಿಸುತ್ತಾರೆ. ಬೀಬಾ ಅವರ ಆನ್‌ಲೈನ್ ಸ್ಟೋರ್ biba.in ದೇಶದ ಮೂಲೆ ಮೂಲೆಗಳನ್ನು ತಲುಪಿದೆ. 2020 ರಲ್ಲಿ, ಅವರ ನಿವ್ವಳ ಮೌಲ್ಯ 710 ಕೋಟಿ ರೂ. ಕಠಿಣ ಪರಿಶ್ರಮ, ಉತ್ಸಾಹ ಮತ್ತು ಧೈರ್ಯದಿಂದ ಯಾವುದೇ ಕನಸು ನನಸಾಗಬಹುದು ಎಂದು ಮೀನಾ ಅವರ ಕಥೆ ಹೇಳುತ್ತದೆ. ಸ್ವಂತವಾಗಿ ದೊಡ್ಡದನ್ನು ಮಾಡಲು ಬಯಸುವ ಮಹಿಳೆಯರಿಗೆ ಇವರು ಒಂದು ಉದಾಹರಣೆ.
