ರಹೀಂ ಹತ್ಯೆ ಪ್ರಕರಣ -ಸುರತ್ಕಲ್‌ನಲ್ಲಿ ಬಸ್‌ಗಳಿಗೆ ಕಲ್ಲು ತೂರಾಟ

ಮಂಗಳೂರು : ಬಂಟ್ವಾಳ ತಾಲ್ಲೂಕಿನ ಇರಾ ಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕಿಡಿಗೇಡಿಗಳು ಸುರತ್ಕಲ್ ನಲ್ಲಿ ಖಾಸಗಿ ಬಸ್ ಗೆ ಕಲ್ಲು ತೂರಾಟ ನಡೆಸಿದ್ದಾರೆ. ಈ ನಡುವೆ ಬಂಟ್ವಾಳದ ರಹೀಂ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರಿನಿಂಂದ ಬಂಟ್ವಾಳದವರೆಗಿನ ನೂರಾರು ಅಂಗಡಿಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ದುಷ್ಕರ್ಮಿಗಳಿಂದ ಕೊಲೆಯಾದ ಅಬ್ದುಲ್ ರಹೀಂ ಅವರ ಮೃತದೇಹವನ್ನು ಕೊಳತ್ತಮಜಲಿಗೆ ಇಂದು ಬೆಳಗ್ಗೆ ಸಾಗಿಸಲಾಯಿತು. ಕುತ್ತಾರ್ ಮದನಿ ನಗರ ಮಸೀದಿಯಲ್ಲಿ ರಹೀಂ ಅವರ ಮಯ್ಯತ್ ಸ್ನಾನ ಮಾಡಲಾಯಿತು. ನಂತರ ಮಯ್ಯತ್ ನಮಾಝ್ ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಮೆರವಣಿಗೆಯ ಮೂಲಕ ಸಾಗಿಸಲಾಯಿತು. ಈ ವೇಳೆ ನೂರಾರು ಜನ ಸೇರಿದ್ದರು. ಅಲ್ಲದೇ ಹತ್ಯೆ ಖಂಡಿಸಿ ಮಂಗಳೂರಿನಿಂದ ಬಂಟ್ವಾಳದವರೆಗೆ ಅಂಗಡಿಗಳ ಮುಂಗಟ್ಟುಗಳು ಬಂದ್ ಮಾಡಿ ಮುಸ್ಲಿಮ್ ವ್ಯಾಪಾರಿಗಳು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಉಳ್ಳಾಲ ತಾಲ್ಲೂಕಿನ ಕುತ್ತಾರಿನಿಂದ ಹೊರಟ ಅಂತಿಮಯಾತ್ರೆಯು ಮಂಗಳೂರಿನ ನಂತೂರು, ಪಡೀಲ್ ಅಡ್ಯಾರ್ ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಸಾಗಿತು. ರಹೀಂ ಅವರ ಪಾರ್ಥಿವ ಶರೀರವನ್ನು ಹೊತ್ತ ಆಂಬುಲೆನ್ಸ್ ಫರಂಗಿಪೇಟೆಯ ಬಳಿ ಸಾಗುತ್ತಿದ್ದಂತೆಯೇ ಅಲ್ಲಿ ಸೇರಿದ್ದವರು ಅಂತಿಮ ನಮನ ಸಲ್ಲಿಸಿದರು. ಫರಂಗಿಪೇಟೆಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಬಿ.ಸಿ.ರೋಡ್‌ನ ಮಿತ್ತಬೈಲ್ ಜುಮ್ಮಾ ಮಸೀದಿ ಬಳಿ ತಲುಪುವಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಿ.ಸಿ.ರೋಡ್‌ನಲ್ಲೂ ಬಹುತೇಕ ಅಂಗಡಿ ಮಳಿಗೆಗಳು ಮುಚ್ಚಿದ್ದವು. ತೆರೆದಿದ್ದ ಕೆಲವು ಮಳಿಗೆಗಳನ್ನು ಕೆಲವು ಆಕ್ರೋಶಿತ ಯುವಕರು ಬಲವಂತದಿಂದ ಮುಚ್ಚಿಸಿದರು. ಕೆಲಕಾಲ ರಸ್ತೆ ತಡೆ ನಡೆಸಿದರು.
ಫರಂಗಿಪೇಟೆ ಹಾಗೂ ಬಿ.ಸಿ.ರೋಡ್‌ನಲ್ಲಿ ಅಂತಿಮಯಾತ್ರೆ ಸಾಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಮತ್ತು ಮಂಗಳೂರು ನಡುವೆ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಮಂಗಳೂರಿನಲ್ಲಿ ಕೆಲವು ಸಿಟಿಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಸುರತ್ಕಲ್ ಮಂಗಳೂರು ಸುರತ್ಕಲ್, ಮುಕ್ಕ ಹಳೆಯಂಗಡಿ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಬಸ್‌ಗೆ ಸುರತ್ಕಲ್‌ನಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.