ರಾಜ್ಯಾದ್ಯಂತ ಜಾತಿ ಸಮೀಕ್ಷೆ: ಮೊದಲ ದಿನ ನೀರಸ ಆರಂಭ; 20 ಲಕ್ಷ ಜನರ ಗುರಿ, ಸಮೀಕ್ಷೆಯಾಗಿದ್ದು ಕೇವಲ 10 ಸಾವಿರ ಮಂದಿ

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಹೊರತುಪಡಿಸಿ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೀರಸ ಆರಂಭ ಕಂಡಿದ್ದು ಮೊದಲ ದಿನ ಕೇವಲ 10 ಸಾವಿರ ಮಂದಿಯ ಸಮೀಕ್ಷೆ (Caste Survey) ನಡೆಸಲಾಗಿದೆ.ಪ್ರತಿ ದಿನ 20 ಲಕ್ಷ ಜನರ ಸಮೀಕ್ಷೆ ಮಾಡಬೇಕೆಂದು ಗುರಿಯನ್ನು ಹಾಕಲಾಗಿದೆ. ಆದರೆ ಮೊದಲ ದಿನವಾದ ಸೋಮವಾರ 2,765 ಕುಟುಂಬಗಳ 10,642 ಮಂದಿಯ ಸಮೀಕ್ಷೆಯನ್ನ ಮಾತ್ರ ಮಾಡಲಾಗಿದೆ.

ಗಣತಿದಾರರಿಗೆ ಆ್ಯಪ್ ಬಗ್ಗೆ ಅಪೂರ್ಣ ಮಾಹಿತಿ, ಇಂಟರ್‌ನೆಟ್ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆ್ಯಪ್ ಕೆಲಸ ಮಾಡದೇ ಇರುವುದು, ಕೆಲವು ಕಡೆ ಕಿಟ್‌ಗಳು ಸಂಜೆ ವೇಳೆ ಸಿಬ್ಬಂದಿಯ ಕೈ ಸೇರಿದ್ದು, ಇನ್ನು ಕೆಲವರಿಗೆ ಕಿಟ್ ಸಿಕ್ಕಿದರೂ ಮೊಬೈಲ್ ನೆಟ್ವರ್ಕ್ ಕೈಕೊಟ್ಟಿದ್ದರಿಂದ ಮೊದಲ ದಿನ ಕಡಿಮೆ ಸಂಖ್ಯೆಯ ಜನರನ್ನು ಮಾತ್ರ ಗಣತಿ ಮಾಡಲಾಗಿದೆ.
ಇಂಟರ್ನೆಟ್ ಇಲ್ಲದೆಡೆ ಆ್ಯಪ್ ಕೆಲಸ ನಿರ್ವಹಿಸದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ಗಣತಿ ನಡೆಸಲು ಆಯೋಗ ಸಿದ್ಧತೆ ನಡೆಸಿದೆ.
