ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 39 ಮಂದಿ ಸಾವು, ಪರಿಹಾರ ಘೋಷಣೆ

ಚೆನ್ನೈ: ಕಾಲಿವುಡ್ ನಟ, ‘ತಮಿಳಿಗ ವೆಟ್ರಿ ಕಳಗಂ’ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಸೆ.27ರಂದು ನಡೆಸಿದ ರ‍್ಯಾಲಿಯಲ್ಲಿ ಕಾಲ್ತುಳಿತ ಉಂಟಾಗಿ 39 ಜನರು ಮೃತರಾಗಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ವಿಜಯ್, ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪೋಸ್ಟ್ ಮಾಡಿದ್ದಾರೆ

ಈ ಬಗ್ಗೆ ಅವರು ಟಿವಿಕೆ ಪಕ್ಷದ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಪೋಸ್ಟ್ ಮಾಡಿರುವ ಅವರು, ‘ನಿನ್ನೆ ನಡೆದ ಘಟನೆಯಿಂದ ತೀವ್ರ ನೋವಾಗಿದೆ. ಅದನ್ನು ಹೇಗೆ ವಿವರಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾನು ಸಂತಾಪ ಸೂಚಿಸುತ್ತೇನೆ. ಏನೇ ಕೊಟ್ಟರೂ ಆಗಿರುವ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಆದರೂ, ಕುಟುಂಬದ ಸದಸ್ಯರಲ್ಲಿ ನಾನೂ ಒಬ್ಬನಾಗಿ ಮೃತರ ಕುಟುಂಬದವರಿಗೆ ತಲಾ 20 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.’ಆಗಿರುವ ನಷ್ಟಕ್ಕೆ ಹೋಲಿಸಿದರೆ ಇದು ದೊಡ್ಡ ಪರಿಹಾರದ ಮೊತ್ತವಲ್ಲ. ಆದರೂ ಕೂಡ ಕುಟುಂಬದ ಸದಸ್ಯನಾಗಿ ಈ ಕಷ್ಟದ ಸಂದರ್ಭದಲ್ಲಿ ನಿಮ್ಮ ಜೊತೆ ನಿಲ್ಲುವುದು ನನ್ನ ಕರ್ತವ್ಯ. ಗಾಯಗೊಂಡಿರುವ ನನ್ನ ಎಲ್ಲ ಬಂಧುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲ ಗಾಯಾಳುಗಳ ಚಿಕಿತ್ಸೆಗೆ ನೆರವು ನೀಡುವೆ’ ಎಂದಿದ್ದಾರೆ.ಈ ಕಾಲ್ತುಳಿತದಲ್ಲಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳೆಲ್ಲರೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ರ‍್ಯಾಲಿಯಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಈ ಘಟನೆಗೆ ಕಾರಣವೇನು ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ.
