ಗಾಣಗಾಪುರ ದತ್ತಾತ್ರೇಯ ದೇಗುಲದಲ್ಲಿ ನೂಕುನುಗ್ಗಲು, ಮಹಿಳೆ ಸಾವು!

ಕಲಬುರಗಿ: ಅವರೆಲ್ಲಾ ದೇವರ ದರ್ಶನಕ್ಕೆ ಬಂದಿದ್ದರು. ಗುರುಪೂರ್ಣಿಮೆ (Guru Purnima) ದಿನ ದತ್ತಾತ್ರೇಯನ ದರ್ಶನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗೆ ದರ್ಶನಕ್ಕೆ ಕಾಯುತ್ತಿರುವಾಗಲೇ ಘೋರ ಘಟನೆಯೊಂದು ನಡೆದಿದೆ. ನೂಕು ನುಗ್ಗಲು (Rush) ಸಂಭವಿಸಿ ಓರ್ವ ಮಹಿಳೆ ಸನ್ನಿಧಿಯಲ್ಲೇ ಸಾವಿನ ಮನೆ ಸೇರಿದ್ದಾರೆ.

ಕಲಾವತಿ ಮೃತ ಮಹಿಳೆ. ಮೊದಲಿಗೆ ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿತ್ತು. ಆದರೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸಲು ಸ್ಪಷ್ಟನೆ ನೀಡಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಭಕ್ತರು
ಗುರುವಾರದಂದು ಎಲ್ಲೆಡೆ ಗುರುಪೂರ್ಣಿಮೆ ಸಂಭ್ರಮ. ಗುರುವನ್ನ ಆರಾಧಿಸುವ ದಿನ. ಹಾಗಾಗಿ ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತಾತ್ರೇಯ ದೇಗುಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ರಾಜ್ಯ ಮಾತ್ರವಲ್ಲದೆ ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿದ್ದರು. ಜನ ಹೆಚ್ಚಾಗುತ್ತಿದ್ದಂತೆ ಸಂಜೆಯ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದೆ.
ಎಸ್‌ಪಿ ಅಡ್ಡೂರು ಶ್ರೀನಿವಾಸಲು ಹೇಳಿದ್ದಿಷ್ಟು
ಈ ನೂಕುನುಗ್ಗಲು ನಡುವೆ ಸಂಜೆ 5.30 ವೇಳೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಕುಲ ಗ್ರಾಮದ ಕಲಾವತಿ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ. ಆದರೆ ಕಲಾವತಿ ಅವರು ಬದುಕುಳಿಯಲೇ ಇಲ್ಲ. ಇನ್ನು ಕಾಲ್ತುಳಿತದಿಂದಾಗಿ ಮಹಿಳೆ ಮೃತಪಟ್ಟಿದ್ದಾರೆ ಅಂತಾ ಹೇಳಲಾಗಿತ್ತು. ಆದರೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಅಂತಾ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಸ್ಪಷ್ಟನೆ ನೀಡಿದ್ದಾರೆ.
ಈ ನೂಕು ನುಗ್ಗಲು ವೇಳೆ ಹಲವರು ಸಂಕಷ್ಟ ಅನುಭವಿಸಿದ್ದಾರೆ. ಸದ್ಯ ಮಹಿಳೆ ಸಾವು ಸಂಬಂಧ ಗಾಣಗಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕವೇ ಇದು ಕಾಲ್ತುಳಿತದಿಂದ ಉಂಟಾದ ಸಾವಾ ಅಥವಾ ಕುಸಿದು ಬಿದ್ದು ಮೃತಪಟ್ಟಿರುವುದಾ ಎಂಬುದು ಗೊತ್ತಾಗಲಿದೆ.
ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ: 11 ಜನರು ಸಾವು
ಇನ್ನು 18 ವರ್ಷಗಳ ಬಳಿಕ ಐಪಿಎಲ್ನಲ್ಲಿ ಆರ್ಸಿಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಣೆ ಕೈಗೊಳ್ಳಲಾಗಿತ್ತು. ಈ ವಿಜಯೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸಿದ್ದರು. ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆ ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು.
