ಸಿಎಂ ಭೇಟಿಯ ವೇಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಾಸ್ತವ ಮರೆಮಾಚಿದ ಸಿಬ್ಬಂದಿ: ಆರೋಪ

ಬೆಂಗಳೂರು: ಸೇವೆಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಬುಧವಾರ ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ್ದು, ಈ ವೇಳೆ ಅಲ್ಲಿನ ಸಿಬ್ಬಂದಿಗಳು ಮುಖ್ಯಮಂತ್ರಿಗಳಿಗೆ ವಾಸ್ತವ ಸ್ಥಿತಿಯನ್ನು ಮರೆ ಮಾಡಿ, ಎಲ್ಲವೂ ಸರಿಯಿದೆ ಎಂಬಂತೆ ಬಿಂಬಿಸಿದ್ದಾರೆಂದು ಆರೋಪಗಳು ಕೇಳಿ ಬಂದಿವೆ.

ಆಸ್ಪತ್ರೆ ಪರಿಶೀಲನಗೆ ಮುಖ್ಯಮಂತ್ರಿಗಳು ಬಂದಾಗ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಭೇಟಿಯಾಗಲು ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿ ವಾರ್ಡ್ಗಳ ಮೂಲಕ ನಡೆದು, ಸಿಬ್ಬಂದಿಯನ್ನು ಭೇಟಿಯಾಗಿ ಸೇವೆಗಳನ್ನು ಪರಿಶೀಲಿಸಿದರು, ಆದರೆ, ರೋಗಿಗಳು, ಸಹಾಯಕರೊಂದಿಗೆ ಮಾತನಾಡಲಿಲ್ಲ.
ಹಿರಿಯ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ಸುತ್ತುವರೆದಿದ್ದರು.
ಹೊರರೋಗಿ ವಿಭಾಗ, ಹೆರಿಗೆ ವಾರ್ಡ್ ಮತ್ತು ಇತರ ವಿಭಾಗಗಳು ಸೇರಿದಂತೆ ಆಸ್ಪತ್ರೆಯ ಕೆಲವು ಭಾಗಗಳ ಮೂಲಕ ಮುಖ್ಯಮಂತ್ರಿಗಳನ್ನು ಕರೆದೊಯ್ಯಲಾಯಿತು, ಆದರೆ, ವಾರ್ಡ್ಗಳ ಹೊರಗೆ ಕಾಯುತ್ತಿದ್ದ ಸಹಾಯಕರು, ಹೊರರೋಗಿ ವಿಭಾಗ ಮತ್ತು ಔಷಧಾಲಯಗಳಲ್ಲಿದ್ದ ರೋಗಿಗಳನ್ನು ಅವರ ಹತ್ತಿರಕ್ಕೆ ಬಿಡಲಿಲ್ಲ. ಮುಖ್ಯಮಂತ್ರಿಗಳು ಬಂದು ಹೋದರಷ್ಟೇ. ನಮ್ಮ ದುಃಸ್ಥಿತಿಯನ್ನು ಯಾರೂ ಕೇಳಲಿಲ್ಲ. ಭೇಟಿಗೆ ಯತ್ನಿಸಿದರೂ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ನಮ್ಮನ್ನು ದೂರಕ್ಕೆ ತಳ್ಳಿದರು ಎಂದು ಕಳೆದ 12 ದಿನಗಳಿಂದ ತಮ್ಮ ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವ ಮಳವಳ್ಳಿಯ ಜಮೀಲ್ ಕರೀಮ್ ಎಂಬುವವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ 2 ವಾರಗಳಿಂದ ತೆರೆದ ಸ್ಥಳದಲ್ಲೇ ಆಹಾರ ಸೇವನೆ, ಸಾರ್ವಜನಿಕ ಶೌಚಾಲಯ ಬಳಕೆ ಮಾಡಿ, ಎಲ್ಲಿ ಸಾಧ್ಯವಾಗುವುದೋ ಅಲ್ಲಿ ಮಲಗುತ್ತಿದ್ದೇನೆ. ಅನೇಕ ಅಟೆಂಡೆಂಟ್ಗಳು ಮರಗಳ ಕೆಳಗೆ, ಆಂಬ್ಯುಲೆನ್ಸ್ಗಳ ಬಳಿ ಅಥವಾ ತುರ್ತು ಮತ್ತು ಆಘಾತ ಆರೈಕೆ ಮತ್ತು ಒಳರೋಗಿ ವಾರ್ಡ್ಗಳಲ್ಲಿ ಗೇಟ್ಗಳ ಹಿಂದೆ ಮಲಗುತ್ತಿದ್ದಾರೆ. ಇದರಿಂದ ತುರ್ತು ಪರಿಸ್ಥಿತಿ ಇದ್ದಾಗ ಕೂಡಲೇ ಹೋಗಬಹುದು ಎಂದು ಮತ್ತೊಬ್ಬ ರೋಗಿಯ ಕುಟುಂಬದವರು ತಿಳಿಸಿದ್ದಾರೆ.
ಇನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರು ಸಿಎಂ ಭೇಟಿ ನೀಡಿದ 2 ಗಂಟೆಗಳ ಬಳಿಕ ಆಸ್ಪತ್ರೆ ಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಲು ಯತ್ನ ನಡೆಸಿದರು. ಈ ವೇಳೆ ಹಲವಾರು ರೋಗಿಗಳ ಅಟೆಂಡೆಂಟ್ಗಳು ನೆಲದ ಮೇಲೆ, ಮೆಟ್ಟಿಲುಗಳ ಮೇಲೆ, ಮರಗಳ ಕೆಳಗೆ ಕುಳಿತಿರುವುದು ಕಂಡು ಬಂದಿತು.
ಮುಖ್ಯಮಂತ್ರಿಗಳ ಮುಂದೆ ಆಸ್ಪತ್ರೆಯ ಸಿಬ್ಬಂದಿ ಎಲ್ಲವೂ ಉತ್ತಮವಾಗಿದೆ ಎಂದು ತೋರಿಸಿದ್ದರೂ. ಅಟೆಂಡೆಂಟ್ಗಳ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬಂದಿತು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಟೆಂಡೆಂಟ್ಗಳಿಗೆ ವಸತಿ ನಿಲಯ ಸೌಲಭ್ಯಗಳಿದ್ದರೂ, ಹೆಚ್ಚಿನ ಜನರಿಗೆ ಅವುಗಳ ಬಗ್ಗೆ ಮಾಹಿತಿಯಿಲ್ಲದಂತಾಗಿದೆ. ತಿಳಿದಿರುವವರಿಗೆ ಪ್ರಶ್ನೆ ಮಾಡಿದರೂ, ಆ ಸ್ಥಳದಲ್ಲಿ ಈಗಾಗಲೇ ಸಾಕಷ್ಟು ಮಂದಿಯಿದ್ದಾರೆಂದು ಹೇಳಿದ್ದಾರೆ.
ನಾವು ಇಡೀ ದಿನ ಹೊರಗಿದ್ದೇವೆ. ಇಲ್ಲಿನ ಭದ್ರತಾ ಸಿಬ್ಬಂದಿಗಳು ಇಲ್ಲಿರಬೇಡಿ, ಆಲ್ಲಿ ಮಲಬೇಡಿ ಎನ್ನುತ್ತಾರೆ. ಆದರೆ ನಾವು ಎಲ್ಲಿಗೆ ಹೋಗಬೇಕು? ಎಂದ ಹಾಸನದ ಮಂಜುನಾಥ್ ಎಂಬುವವರು ಪ್ರಶ್ನಿಸಿದ್ದಾರೆ.
ರಾತ್ರಿಯಲ್ಲಿ, ಅನೇಕ ಅಟೆಂಡೆಂಟ್ಗಳು ವಾರ್ಡ್ಗಳ ಬಳಿ ಮಲಗಲು ಪ್ರಯತ್ನಿಸುತ್ತಾರೆ, ಆದರೆ, ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅಥವಾ ಪೊಲೀಸರು ಅವರನ್ನು ಹೊರಹೋಗುವಂತೆ ಸೂಚಿಸುತ್ತಾರೆ. ಸಿಬ್ಬಂದಿ ಹೋದ ಬಳಿಕ ಮತ್ತೆ ಜನರು ಸ್ಥಳದಲ್ಲಿ ಮಲಗುವುದು, ಕುಳಿತುಕೊಳ್ಳುವುದು ಮಾಡುತ್ತಾರೆಂದು ಹೇಳಿದ್ದಾರೆ.
ಇದಲ್ಲದೆ, ಆಸ್ಪತ್ರೆಯ ಸಿಬ್ಬಂದಿಗಳ ವಿರುದ್ಧ ಲಂಚ ಕೇಳುತ್ತಿರುವ ಆರೋಪ ಕೂಡ ಕೇಳಿ ಬರುತ್ತಿದೆ. ಆಸ್ಪತ್ರೆಯ ಸಿಬ್ಬಂದಿ ಅಥವಾ ಸಹಾಯಕರು ಸ್ಟ್ರೆಚರ್ ಒದಗಿಸಲು ರೂ.100 ಕೇಳುತ್ತಾರೆಂದು ರೋಗಿಗಳ ಕುಟುಂಬ ಸದಸ್ಯರು ಆರೋಪಿಸುತ್ತಿದ್ದಾರೆ.
ಸ್ಟ್ರೆಚರ್ ಒದಗಿಸಲು ರೂ.100 ಕೇಳುತ್ತಾರೆ, ಹಣ ನೀಡಿದ್ದರೆ, ಕಾಯುವಂತೆ ತಿಳಿಸುತ್ತಾರೆ. ಸಾಕಷ್ಟು ಸಮಯ ಕಾಯಿಸುತ್ತಾರೆ. ಈ ಬಗ್ಗೆ ದೂರು ನೀಡಿದರು, ಯಾವುದೇ ಪ್ರಯೋಜನವಿಲ್ಲ ಎಂದು ಶಿವಮೊಗ್ಗದಿಂದ ತಮ್ಮ ತಂದೆಯನ್ನು ಆಸ್ಪತ್ರೆಗೆ ಕರೆತಂದಿರುವ ರಾಜೇಂದ್ರ ಎಂಬುವವರು ಹೇಳಿದ್ದಾರೆ.
