ಶಿಕ್ಷಣ ಇಲಾಖೆ ಕಣ್ಣಿಗೆ ಬೀಳದೆ ಯೂಟ್ಯೂಬ್ ಚಾನೆಲ್‌ನಲ್ಲಿ SSLC ಪ್ರಶ್ನೆ ಪತ್ರಿಕೆ ಲೀಕ್

ಬೆಂಗಳೂರು: ಸೋಮವಾರ ನಡೆದ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆಯ ವಿಜ್ಞಾನ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಆರೋಪ ಕೇಳಿ ಬಂದಿದೆ. ಕೆಲ ಯೂಟ್ಯೂಬ್ ಚಾನೆಲ್ ಗಳಲ್ಲಿ ವಿಜ್ಞಾನ ವಿಷಯದ ಭೌತಶಾಸ್ತ್ರ ವಿಭಾಗದ ಸಂಬಂಧಿತ ಪ್ರಶ್ನೆ ಪತ್ರಿಕೆ ಎನ್ನಲಾದ ಕೆಲವು ಪ್ರತಿಗಳು ಪರೀಕ್ಷೆ ಆರಂಭಕ್ಕೆ 18 ಗಂಟೆಗಳ ಮೊದಲೇ ಹರಿದಾಡಿವೆ.

ಸೋಮವಾರ ಪ್ರಶ್ನೆ ಪರೀಕ್ಷೆಯಲ್ಲಿ ನೀಡಿದ ಪ್ರಶ್ನೆ ಪತ್ರಿಕೆಯನ್ನು ಸೋರಿಕೆಯಾದ ಪ್ರಶ್ನೆ ಪತ್ರಿಕೆ ಜೊತೆ ತಾಳೆ ಹಾಕಿ ನೋಡಿದಾಗ ಎರಡು ಒಂದೇ ಆಗಿದೆ. ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.
ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಶ್ನೆ ಪತ್ರಿಕೆ ಅಪ್‌ಲೋಡ್!
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಜೆರಾಕ್ಸ್ ಮಾಡಿ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ‘ಬ್ರೇನ್ ಸ್ಟೇಷನ್’ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, 27,221 ಜನರು ವೀಕ್ಷಿಸಿದ್ದಾರೆ.