ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ವಿರೋಧಿಸುವುದಿಲ್ಲ-ಶ್ರೀರಾಮುಲು ಸ್ಪಷ್ಟನೆ

ಬಳ್ಳಾರಿ : ನನಗೆ ಎಲ್ಲ ಧರ್ಮಿಯರೂ ಒಂದೇ. ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ನಾನು ವಿರೋಧಿಸುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಧರ್ಮಿಯ ಮತ್ತು ಎಲ್ಲ ಜಾತಿಯವರನ್ನು ಒಂದೇ ಭಾವನೆಯಿಂದ ನೋಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ನಮಗೆ ಏನು ಕೊಟ್ಟಿಲ್ಲ ಎಂಬುದನ್ನಷ್ಟೇ ಮಾತನಾಡುತ್ತೇನೆಯೇ ಹೊರತು, ಅವರಿಗೆ ಯಾಕೆ ಕೊಟ್ಟಿರಿ ಎಂದು ಕೇಳುವುದಿಲ್ಲ. ಪಕ್ಷದ ನಿರ್ಧಾರದಂತೆ ಅಲ್ಪಸಂಖ್ಯಾತರಿಗೆ ಆದ್ಯತೆ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದೆ. ಪಕ್ಷ ವಿರೋಧಿಸಿದರೆ ಅದು ಪಕ್ಷದ ವಿಚಾರ. ಈ ಕುರಿತು ಹೆಚ್ಚು ಪ್ರತಿಕ್ರಿಯಿಸಲಾರೆ ಎಂದರಲ್ಲದೆ, ನಾನೂ ಮುಂದಿನ ದಿನಗಳಲ್ಲಿ ಚುನಾವಣೆಗೆ ತೆರಳಬೇಕಿದೆ. ಎಲ್ಲ ಸಮುದಾಯದ ಜನರ ಬಳಿ ತೆರಳಬೇಕಾಗುತ್ತದೆ ಎಂದರು.
ಸ್ವಾರ್ಥದಿಂದ ಕೂಡಿದ ಬಜೆಟ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ನ್ನು ರಾಜಕೀಯ ಸ್ವಾರ್ಥಕ್ಕಾಗಿ ಮಂಡಿಸಿದ್ದಾರೆ. ಮೊದಲ ಬಾರಿಗೆ ರಾಜ್ಯದಲ್ಲಿ ನಾಲ್ಕು ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡಿಸಿದ ಸಿಎಂ ಅವರ ಇಡೀ ಬಜೆಟ್, ಜನಪರವಾದ ಯೋಜನೆ- ಯೋಚನೆಯಿಲ್ಲದ ಬಜೆಟ್ ಆಗಿದೆ. ಪ್ರಮುಖವಾಗಿ ಆರೋಗ್ಯ ಇಲಾಖೆ, ಕೃಷಿ, ಶಿಕ್ಷಣ, ಮೂಲ ಸೌಕರ್ಯ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಶ್ರೀರಾಮುಲು ಆರೋಪಿಸಿದರು.
₹51 ಸಾವಿರ ಕೋಟಿ ಗ್ಯಾರಂಟಿಗೆ ಮೀಸಲಿಟ್ಟಿದ್ದಾರೆ. ಆದರೆ, ನಾಲ್ಕು ಸಾರಿಗೆ ನಿಗಮಗಳಲ್ಲಿ ಸಿಬ್ಬಂದಿಯ ₹900 ಕೋಟಿ ಪಿಎಫ್ ವಂತಿಕೆ ಕಟ್ಟುವುದನ್ನು ಸರ್ಕಾರ ನಿಲ್ಲಿಸಿದೆ. ಸಾರಿಗೆ ಸಿಬ್ಬಂದಿಯ ರಕ್ಷಣೆ, ನಿಗಮಗಳ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದೆ. ರಾಜ್ಯದ ಮೇಲೆ ಏಳು ಲಕ್ಷ ಕೋಟಿ ಸಾಲವಿದ್ದು, ಇದರಲ್ಲಿ ಸುಮಾರು ಒಂದು ಲಕ್ಷ ಕೋಟಿ ಸಾಲವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿಯೇ ಆಗಿದೆ. ಈ ಮೂಲಕ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.