ಮದ್ಯಪಾನ ತ್ಯಜಿಸಿರುವುದಾಗಿ ಹೇಳಿದ್ದ ಸ್ಪಿನ್ನರ್ ಚಾಹಲ್; ವಿಡಿಯೋ ಬೆನ್ನಲ್ಲೇ ಶುರುವಾಯ್ತು ಭಾರಿ ಚರ್ಚೆ

ಮುಂಬಯಿ: ಭಾರತೀಯ ಕ್ರಿಕೆಟ್ ತಂಡ ಮತ್ತು ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಎನ್ನುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಚಾಹಲ್ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಕಾರು ಚಾಲನೆ ಮಾಡುವಾಗ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ.

ಮಾತ್ರವಲ್ಲದೆ ಸಿಗರೇಟ್ ಅನ್ನು ರಸ್ತೆಯಲ್ಲಿ ಎಸೆಯುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ವಿಡಿಯೊದಲ್ಲಿರುವ ವ್ಯಕ್ತಿ ಚಹಲ್ ಎಂದು ಖಚಿವಾಗಿಲ್ಲವಾದರೂ ಅವರ ವಿರುದ್ಧ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಚಾಹಲ್ ಅಥವಾ ಅವರ ಪ್ರತಿನಿಧಿಗಳು ಘಟನೆ ಬಗ್ಗೆ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ.
ಐಪಿಎಲ್ ಆರಂಭಕ್ಕೂ ಮುನ್ನ ಚಾಹಲ್ ಮದ್ಯಪಾನ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಬಹಿರಂಗಪಡಿಸಿದ್ದರು. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರೊಂದಿಗಿನ ಇತ್ತೀಚಿನ ಪಾಡ್ಕ್ಯಾಸ್ಟ್ನಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ವೇಳೆ ಚಹಲ್ ಈ ವಿಚಾರವನ್ನು ತಿಳಿಸಿದ್ದರು. ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ ಚಾಹಲ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಬಾರಿ ಇದುವರೆಗೂ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡು ಬಂದಿಲ್ಲ.
ನಾನು ಮದ್ಯಪಾನ ನಿಲ್ಲಿಸಿ ಆರು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ನನಗೆ ಈಗ 35 ವರ್ಷ, ಆದ್ದರಿಂದ ನಾನು ಹೆಚ್ಚು ಸಕ್ರಿಯನಾಗಿ ನನ್ನ ತಂಡಕ್ಕಾಗಿ ನನ್ನ ಶೇ. 150ರಷ್ಟು ಪರಿಶ್ರಮ ನೀಡಲು ಬಯಸುತ್ತೇನೆ. ಹಿರಿಯ ಆಟಗಾರನಾಗಿ, ಐಪಿಎಲ್ನಲ್ಲಿರುವ ಜನರು ನನ್ನಿಂದ ಏನನ್ನಾದರೂ ಕಲಿಯಬೇಕೆಂದು ನಾನು ಬಯಸುತ್ತೇನೆ” ಎಂದು ಚಾಹಲ್ ಡಿವಿಲಿಯರ್ಸ್ಗೆ ತಿಳಿಸಿದ್ದರು.
ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಆಡಿದ 4 ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿದೆ. ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಸನ್ರೈಸರ್ಸ್ ವಿರುದ್ಧ 6 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಸನ್ರೈಸರ್ಸ್ ಹೈದರಾಬಾದ್ ಎದುರು 220 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಪಂಜಾಬ್, 18.5 ಓವರ್ಗಳಲ್ಲಿ 4 ವಿಕೆಟ್ಗಳಿಗೆ 223 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಜತೆಗೆ ಗರಿಷ್ಠ 10 ಬಾರಿ 200 ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್ ನಡೆಸಿದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ.