ದೆಹಲಿ-ಲೇಹ್ ಸ್ಪೈಸ್‌ಜೆಟ್ ವಿಮಾನ ತುರ್ತು ಭೂಸ್ಪರ್ಶ: 150 ಪ್ರಯಾಣಿಕರು ಸುರಕ್ಷಿತ

ಹೊಸದಿಲ್ಲಿ: ದಿಲ್ಲಿಯಿಂದ ಲೇಹ್ ಗೆ ತೆರಳುತ್ತಿದ್ದ ಸ್ಟೈಸ್ ಜೆಟ್ ಬೋಯಿಂಗ್ 737 ವಿಮಾನದ ಒಂದು ಇಂಜಿನ್ ವಿಫಲಗೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಬೋಯಿಂಗ್ 737 ವಿಮಾನ ಸಂಖ್ಯೆ SG121ಯಲ್ಲಿ ಸುಮಾರು 150 ಮಂದಿ ಪ್ರಯಾಣಿಕರಿದ್ದರು ಎಂದೂ ಮೂಲಗಳು ತಿಳಿಸಿವೆ.
ತಾಂತ್ರಿಕ ದೋಷ ಕಂಡು ಬರುತ್ತಿದ್ದಂತೆಯೇ ಪೈಲಟ್ ‘ಮೇ ಡೇ’ ಎಂದು ಕೂಗಿಕೊಂಡರು ಎಂದು ವರದಿಯಾಗಿದೆ.


ಬೆಳಗ್ಗೆ 6.08 ಗಂಟೆಗೆ ಹಾರಾಟ ನಡೆಸಿದ ವಿಮಾನವು 6.49ರ ವೇಳೆಗೆ ತುರ್ತು ಭೂಸ್ಪರ್ಶ ಮಾಡಿತು. ಶಿಷ್ಟಾಚಾರದ ಪ್ರಕಾರ, ದಿಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕಾಗಿ ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಸ್ಟೈಸ್ ಜೆಟ್ ವಿಮಾನ ಯಾನ ಸಂಸ್ಥೆಯ ವಕ್ತಾರರೊಬ್ಬರು, “ದಿಲ್ಲಿಯಿಂದ ಲೇಹ್ ಗೆ ತೆರಳುತ್ತಿದ್ದ ಸ್ಟೈಸ್ ಜೆಟ್ ವಿಮಾನವೊಂದು ತಾಂತ್ರಿಕ ದೋಷ ಕಂಡು ಬಂದ ಬಳಿಕ ದಿಲ್ಲಿಗೆ ವಾಪಸ್ಸಾಗಿದೆ. ದಿಲ್ಲಿಯಲ್ಲಿ ವಿಮಾನವು ಸುರಕ್ಷಿತವಾಗಿ ಇಳಿದಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸಹಜವಾಗಿ ಕೆಳಗಿಳಿಸಲಾಯಿತು” ಎಂದು ತಿಳಿಸಿದ್ದಾರೆ.
ಕಾಕ್ ಪಿಟ್ ನಲ್ಲಿ ಯಾವುದೇ ಬೆಂಕಿಯ ಎಚ್ಚರಿಕೆ ಕಂಡು ಬಂದಿಲ್ಲ ಎಂದೂ ಅವರು ಹೇಳಿದ್ದಾರೆ.