ನಿರರ್ಗಳವಾಗಿ ಇಂಗ್ಲಿಷ್ ಮಾತಾಡುತ್ತಾ ಅತಿಥಿಯ ವೇಷದಲ್ಲಿ ಕರೆನ್ಸಿ ಕಳ್ಳತನ

ಬೆಂಗಳೂರು:ನಗರದ ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಯುವ ಐಷಾರಾಮಿ ಕಾರ್ಯಕ್ರಮಗಳಲ್ಲಿ ಅತಿಥಿಯಂತೆ ಭಾಗವಹಿಸಿ ಅಲ್ಲಿದ್ದ ಅತಿಥಿಗಳ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ 57 ವರ್ಷ ಚಿಂತಾಕಿಂಡಿ ಶ್ರೀನಿವಾಸಲು ಬಂಧಿತ ವ್ಯಕ್ತಿ.

ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಶಾಂಗ್ರಿಲಾ ಹೊಟೇಲ್‌ನಲ್ಲಿ ವಾರದ ಹಿಂದೆ ಕಳ್ಳತನ ಪ್ರಕರಣ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ.
ಈತ ಹೊಟೇಲ್‌ಗೆ ಆಗಮಿಸುತ್ತಿದ್ದ ನಿಜವಾದ ಅತಿಥಿಗಳ ಬಳಿ ಇದ್ದ ವಿದೇಶಿ ಹಾಗೂ ಸ್ವದೇಶಿ ಹಣವನ್ನು ಕಳ್ಳತನ ಮಾಡುತ್ತಿದ್ದ. ಪೊಲೀಸರ ಪ್ರಕಾರ, ಜೂನ್ 21 ಮತ್ತು ಜೂನ್ 28 ರ ನಡುವೆ ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ಎಪಿಎಸಿ ಗ್ರೂಪ್ ಆಯೋಜಿಸಿದ್ದ ಎಪಿಎಸಿ-2025 ವಾರ್ಷಿಕ ಸಭೆಯಲ್ಲಿ ಕಳ್ಳತನ ಆರೋಪಿ ಶ್ರೀನಿವಾಸುಲು ಭಾಗವಹಿಸಿದ್ದರು. ಹೋಟೆಲ್‌ನ ಮೊದಲ ಮಹಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಣ ಕಳೆದುಕೊಂಡ ರೋಜರ್ ನೀನ್‌ಪೋ ಶೆಂಗ್(Roger Nienpo Sheng) ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಜೂನ್ 23ರಂದು ರೋಜರ್ ನೀನ್‌ಪೋ ಶೆಂಗ್ ಅವರಿಗೆ ತಮ್ಮ ಬ್ಯಾಗ್‌ನಲ್ಲಿ ಇದ್ದ 300 ಯುಸ್ ಡಾಲರ್ ಹಾಗೂ 3000 ತೈವಾನ್ ಡಾಲರ್ ಕಾಣೆಯಾಗಿರುವುದು ತಿಳಿದು ಬಂದಿದೆ. ಈ ಸಂಬಂಧ ಅವರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆಗಿಳಿದ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ವಾರಗಳ ಕಾಲ ಆರೋಪಿಗಾಗಿ ಹುಡುಕಾಟ ನಡೆಸಿ ಆರೋಪಿ ಶ್ರೀನಿವಾಸುಲು ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ತಾನು ರತ್ನದ ಕಲ್ಲುಗಳ ವ್ಯವಹಾರ ಮಾಡುತ್ತಿರುವುದಾಗಿ ಆರೋಪಿ ಶ್ರೀನಿವಾಸುಲು ಪೊಲೀಸರಿಗೆ ಹೇಳಿದ್ದ. ಈತ ಅಮೆರಿಕಾ, ತೈವಾನ್, ಲಾವೋಸ್, ಆಸ್ಟೇಲಿಯಾ, ಪ್ರತಿನಿಧಿಗಳಿಂದ ಅವರವರ ದೇಶದ ಕರೆನ್ಸಿಗಳನ್ನು ಕಳ್ಳತನ ಮಾಡಿದ್ದಾನೆ ಐಷಾರಾಮಿ ಹೊಟೇಲ್‌ಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ಬಗ್ಗೆ ಈತ ಆನ್‌ಲೈನ್ ಮೂಲಕ ಮಾಹಿತಿ ಪಡೆಯುತ್ತಿದ್ದ. ಶಾಂಗ್ರಿಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತ್ರವಲ್ಲದೇ ಭಾರತೀಯ ವಿಜ್ಞಾನ ಸಂಸ್ಥೆಯ ಜೆಎನ್ ಟಾಟಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಂದಲೂ ಹಣವನ್ನು ಕದ್ದಿದ್ದಾನೆ.
ಜೆಎಸನ್ ಟಾಟಾ ಆಡಿಟೋರಿಯಂನಲ್ಲಿ ಆತ 200 ಆಸ್ಟೇಲಿಯನ್ ಡಾಲರ್ ಹಾಗೂ 7,000 ಲಾವೋಸ್ ದೇಶದ ಡಾಲರ್‌ಗಳನ್ನು ಕದ್ದಿದ್ದಾನೆ. ಶಾಂಗ್ರಿಲಾ ಹೊಟೇಲ್‌ನಲ್ಲಿ ಕಳ್ಳತನ ನಡೆಸಿ ಮೂರು ದಿನಗಳ ಬಳಿಕ ಅವವರು ವಿಜ್ಞಾನ ಸಂಸ್ಥೆಯ ಜೆಎನ್ ಟಾಟಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಳವು ಮಾಡಿದರು. ಎರಡು ಕಾರ್ಯಕ್ರಮಗಳಲ್ಲಿ ಅವರು ವಿಶೇಷ ಅತಿಥಿಯಂತೆ ಯಾರಿಗೂ ಅನುಮಾನ ಬಾರದಂತೆ ಕಪ್ಪು ಬಣ್ಣದ ಬ್ಲೇಜರ್ ಧರಿಸುತ್ತಿದ್ದರು. ಇಂಗ್ಲೀಷ್‌ನಲ್ಲಿ ಯಾವುದೇ ಅಡ್ಡಿ ಇಲ್ಲದೇ ಬಹಳ ಸೊಗಸಾಗಿ ಮಾತನಾಡುತ್ತಿದ್ದ ಆತ ಬ್ಯಾಗ್‌ಗಳೊಂದಿಗೆ ಒಂಟಿಯಾಗಿ ಭಾಗವಹಿಸುತ್ತಿದ್ದವರನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ, ನಿಜವಾದ ಅತಿಥಿಗಳು ತಮ್ಮ ಬ್ಯಾಗನ್ನು ಎಲ್ಲಿಯಾದರು ಒಂಟಿಯಾಗಿ ಬಿಡುವವರೆಗೆ ಈತ ಕಾಯುತ್ತಿದ್ದ ಬಳಿಕ ಅದನ್ನು ತೆರೆದು ಕರೆನ್ಸಿ ನೋಟುಗಳನ್ನ ದೋಚುತ್ತಿದ್ದ ಎಂದು ಈತನ ವಿರುದ್ಧ ತನಿಖೆ ನಡೆಸಿದ ಪೊಲೀಸರು ಹೇಳಿದ್ದಾರೆ.
ಎಂತೆಂಥಾ ಜನ ಇರ್ತಾರೆ ನೋಡಿ, ಅದ್ಕೆ ಹಿಂದಿನೋರು ಹೇಳಿರೋದು ಮುಖ ನೋಡಿ ಮಣೆ ಹಾಕ್ಬಾರ್ದು ಅಂತ. ಬಹುತೇಕ ಐಷಾರಾಮಿ ಹೊಟೇಲ್‌ಗಳಿಗೆ ಸಾಮಾನ್ಯ ಜನ ಹೋದಾಗ ಕೆಲವು ಹೊಟೇಲ್ ಸಿಬ್ಬಂದಿ ಅವರನ್ನು ಹಳ್ಳಿ ಗುಗ್ಗುಗಳಂತೆ ನೋಡ್ತಾರೆ. ಆದ್ರೆ ಇಲ್ಲಿ ಹೊಟೇಲ್ ಸಿಬ್ಬಂದಿ ಈತನ ನಾಜೂಕು ನೋಟ, ವೇಷ ಭೂಷಣ, ಸೊಗಸಾದ ಇಂಗ್ಲೀಷ್ ನೋಡಿ ಒಳಬಿಟ್ಟಿದ್ದು, ಹೊಟೇಲ್‌ನ ಅತಿಥಿಗಳಿಗೆ ಟೋಪಿ ಬಿದ್ದಿದೆ. ಯಾವುದೇ ವ್ಯಕ್ತಿಯನ್ನು ಅವರ ನೋಟದಿಂದ ಜಡ್ಜ್ ಮಾಡ್ಬಾರ್ದು ಅನ್ನೋದಿಕೆ ಈ ಘಟನೆ ಸಾಕ್ಷಿಯಾಗಿದೆ.
