ಬಿಹಾರ ಚುನಾವಣೆ: ಮೊದಲ ಹಂತದ ಮತದಾನ ಆರಂಭ; ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಪ್ರಧಾನಿ ಮೋದಿ ಮನವಿ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ (PM Modi) ಮತದಾರರನ್ನು ಕೋರಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ಇಂದು ಬಿಹಾರದಲ್ಲಿ ಪ್ರಜಾಪ್ರಭುತ್ವದ ಆಚರಣೆಯ ಮೊದಲ ಹಂತವಾಗಿದೆ. ಈ ಸುತ್ತಿನ ವಿಧಾನಸಭಾ ಚುನಾವಣೆಯ ಎಲ್ಲಾ ಮತದಾರರು ಪೂರ್ಣ ಉತ್ಸಾಹದಿಂದ ಮತ ಚಲಾಯಿಸುವಂತೆ ನಾನು ವಿನಂತಿಸುತ್ತೇನೆ. ಇದೇ ಸಂದರ್ಭದಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸಲಿರುವ ರಾಜ್ಯದ ನನ್ನ ಎಲ್ಲಾ ಯುವ ಮಿತ್ರರಿಗೆ ನನ್ನ ವಿಶೇಷ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಹಲವಾರು ಕ್ಷೇತ್ರಗಳಲ್ಲಿ ಮತದಾನ ಆರಂಭವಾದ ಬೆನ್ನಲ್ಲೇ ಪ್ರಧಾನಿಯವರು ಈ ಮನವಿ ಮಾಡಿದ್ದಾರೆ. ಬಹುಹಂತದ ಚುನಾವಣೆಯು ಬಿಹಾರದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಎನ್‌ಡಿಎ ಮತ್ತು ವಿರೋಧ ಪಕ್ಷವಾದ ಇಂಡಿಯಾ ಬಣ ಸೇರಿದಂತೆ ಪ್ರಮುಖ ಪಕ್ಷಗಳು ರಾಜ್ಯದಲ್ಲಿ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿವೆ.
ಏತನ್ಮಧ್ಯೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ‘ಬಿಹಾರದ ಎಲ್ಲಾ ಅದೃಷ್ಟಶಾಲಿಗಳಿಗೆ ನನ್ನ ನಮನಗಳು. ಇಂದು ಮತದಾನಕ್ಕೆ ಮಹತ್ವದ ದಿನ. ಬಿಹಾರದ ಭವಿಷ್ಯದ ಹಾದಿಯನ್ನು ನೀವು ಒತ್ತುವ ಒಂದೇ ಬಟನ್‌ನಿಂದ ನಿರ್ಧರಿಸಲಾಗುತ್ತದೆ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಮಾನವೀಯತೆಯ ಹಿತದೃಷ್ಟಿಯಿಂದ ನೀವು ನಿಮ್ಮ ಮತ ಚಲಾಯಿಸುವುದು ಅತ್ಯಗತ್ಯ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ
ಬಿಹಾರ ಚುನಾವಣೆಯ (Bihar Election) ಮೊದಲ ಹಂತದ ಚುನಾವಣೆ ಇಂದು ನಡೆಯುತ್ತಿದೆ. 8 ಜಿಲ್ಲೆಗಳ 121 ಕ್ಷೇತ್ರಗಳ ಮತದಾರರು ಇಂದು ಮತದಾನದ ಮಾಡಲಿದ್ದಾರೆ. ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ (Tejswai Yadav), ತೇಜಸ್ವಿ ಸಹೋದರ ತೇಜ್ ಪ್ರತಾಪ್ ಯಾದವ್ (ಜನಶಕ್ತಿ ಜನತಾ ದಳ), ಬಿಜೆಪಿಯ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ (Samrat Choudhary), ಗಾಯಕಿ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಕೂರ್ (Maithili Takuru) ಸೇರಿದಂತೆ 1,314 ಅಭ್ಯರ್ಥಿಗಳ ಭವಿಷ್ಯವನ್ನು 3.75 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.