ಶ್ರೀಕೃಷ್ಣನ ತೊಟ್ಟಿಲು ತೂಗಿ ಮತ್ತೆ ಗಮನ ಸೆಳೆದ ಸ್ಪೀಕರ್ ಯು.ಟಿ. ಖಾದರ್

ಸ್ಪೀಕರ್ ಯು.ಟಿ ಖಾದರ್ ರಾಜಕಾರಣಿಗಳಲ್ಲೇ ವಿಭಿನ್ನ ಎನಿಸುವ ವ್ಯಕ್ತಿತ್ವದ ರಾಜಕಾರಣಿಗಳಲ್ಲಿ ಒಬ್ಬರು ಇದೇ ಕಾರಣಕ್ಕೆ ಕೇಸರಿ ಪಾಳಯದ ಬಿಗಿ ಹಿಡಿತವಿರುವ ಕರಾವಳಿಯಲ್ಲಿಯೂ ಮತ್ತೆ ಮತ್ತೆ ಗೆದ್ದು ಬಂದು ಈಗ ಸ್ಪೀಕರ್ ಆಗಿದ್ದಾರೆ. ಒಳ್ಳೆಯ ಕೆಲಸಗಳನ್ನು ಮಾಡಿದರೆ ಎಲ್ಲರನ್ನು ಸಮಾನವಾಗಿ ಸಾಮರಸ್ಯದಿಂದ ಕಂಡರೆ ಜನ ರಾಜಕೀಯ ಮಾಡುವುದಿಲ್ಲ ಎಂಬುದಕ್ಕೆ ಇವರ ಗೆಲುವೇ ಸಾಕ್ಷಿ. ಹೀಗಿರುವ ಯು.ಟಿ. ಖಾದರ್ ಅವರು ದಕ್ಷಿಣ ಕನ್ನಡದ ಅದರಲ್ಲೂ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೈವಾರಾಧನೆ, ಪೂಜೆ ಸಮಾರಂಭಗಳಿಗೆ ಸದಾ ಹಾಜರಾಗುತ್ತಾರೆ. ತಾನೋರ್ವ ಮುಸ್ಲಿಂ ಎಂಬುದನ್ನು ಅವರೆಲ್ಲೂ ತೋರಿಸಿಕೊಂಡಿದ್ದೆ ಇಲ್ಲ. ಇದೇ ಕಾರಣಕ್ಕೆ ಖಾದರ್ ಎಂದರೆ ಕರಾವಳಿಯ ಜನ ತುಸು ಹೆಚ್ಚೇ ಪ್ರೀತಿಯಿಂದ ಮಾತನಾಡಿಸುತ್ತಾರೆ. ಹಾಗೆಯೇ ಕ್ಷೇತ್ರದ ಜನರನ್ನು ವೋಟು ಹಾಕಿದವರು ವೋಟು ಹಾಕದವರು ಎಂದು ವಿಭಿನ್ನವಾಗಿ ನೋಡದೇ ಎಲ್ಲರ ಕೆಲಸವನ್ನು ಅವರು ಮಾಡಿ ಕೊಡುತ್ತಾರೆ. ಇದೇ ಕಾರಣಕ್ಕೆ ಕ್ಷೇತ್ರದಲ್ಲಿ ಮತ್ತೆ ಮತ್ತೆ ಗೆದ್ದು ಬರುತ್ತಿರುವ ಯು.ಟಿ ಖಾದರ್ ಸಾಬ್ ಈಗ ಮತ್ತೊಂದು ಕಾರಣಕ್ಕೆ ಸಾಕಷ್ಟು ವೈರಲ್ ಆಗಿದ್ದಾರೆ.

ಗೋಪಾಲನ ತೂಗಿದ ಯುಟಿ ಖಾದರ್:
ಕೃಷ್ಣಜನ್ಮಾಷ್ಟಮಿಯಂದು ಯು.ಟಿ ಖಾದರ್ ಅವರು ಶ್ರೀಕೃಷ್ಣನನ್ನು ತೂಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಕೆಳಗೆ ಮೊಣಕಾಲೂರಿ ಕುಳಿತ ಖಾದರ್ ಅವರು ಅಲಂಕೃತವಾದ ಶ್ರೀಕೃಷ್ಣನ ಪುಟ್ಟ ವಿಗ್ರಹವಿರುವ ಉಯ್ಯಾಲೆಯನ್ನು ತೂಗುತ್ತಿದ್ದಾರೆ. ಆದರೆ ಇದು ಇಸ್ಕಾನ್ ವತಿಯಿಂದ ಆಯೋಜಿಸಿದ ಶ್ರೀಕೃಷ್ಣಜನ್ಮಾಷ್ಟಮಿಯಂತೆ ಕಾಣುತ್ತಿದೆ. ಕರಾವಳಿಯಲ್ಲಿ ನಡೆದ ಅಷ್ಟಮಿ ಉತ್ಸವದ ದೃಶ್ಯ ಇದಾಗಿದ್ದು, ಎಲ್ಲಿ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಆದರೆ ವೀಡಿಯೋ ನೋಡಿದ ಕೆಲವರು ಖುಷಿ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಎಂದಿನಂತೆ ದ್ವೇಷ ಕಾರಿದ್ದಾರೆ. ಮತ ಪಡೆಯುವುದಕ್ಕಾಗಿ ಜನರ ಯಾಮಾರಿಸ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಕೃಷ್ಣನ ಲೀಲೆ, ಸರ್ವಂ ಕೃಷ್ಣಮಯಂ ಎಂದಿದ್ದಾರೆ. ಗೋವು ತಿನ್ನುವವರಿಗೆ ಇಷ್ಟುಬಿಲ್ಡಪ್ ಯಾಕೆ ಎಂದು ಒಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದರೆ ಮತ್ತೆ ಒಬ್ಬರು ಕೃಷ್ಣ ಗೋವರ್ಧನ .. ಗೋ ವನೀತಾ ಬಾಹ್ಮಣ ರಕ್ಷಕ .. ಕೃಷ್ಣ ದೇವರ ಈ ಗುಣಗಳು ಅವರ ತೊಟ್ಟಿಲು ತೂಗಿದವರಿಗೆಲ್ಲ ಬರಲಿ .. ದುಡ್ಡಿಗಲ್ಲದೆ ನಿಜವಾದ ಭಕ್ತಿ ಹುಟ್ಟಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಹಿಂದೊಮ್ಮೆ ನಾಗಬನಕ್ಕೆ ಕುಟುಂಬದ ಜಾಗ ನೀಡಿದ್ರು ಸ್ಪೀಕರ್:
ಸೋಶಿಯಲ್ ಮೀಡಿಯಾದ ಇಂದಿನ ಕಾಲಘಟ್ಟದಲ್ಲಿ ಜನರ ಅಭಿಪ್ರಾಯ ಏನೇ ಇರಬಹುದು. ಆದರೆ ಖಾದರ್ ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ಗಮನಿಸಿದವರು ಖಾದರ್ ಕಾರ್ಯವನ್ನು ಮೆಚ್ಚಿಯೇ ಮೆಚ್ಚುತ್ತಾರೆ. ಈ ಹಿಂದೆ ಯು.ಟಿ ಖಾದರ್ ಅವರು ನಾಗಬನವೊಂದರ ನಿರ್ಮಾಣಕ್ಕಾಗಿ ತಮ್ಮ 20 ಸೆಂಟ್ ಜಾಗವನ್ನು ಬಿಟ್ಟು ಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಪುಣಚ ಎಂಬಲ್ಲಿ ನಾಗನ ಆರಾಧನೆಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸುಮಾರು 20 ಸೆಂಟ್ಸ್ ಜಾಗ ಬಿಟ್ಟುಕೊಟ್ಟಿದ್ದರು. ಇದೇ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ ಸಂಭ್ರಮದ ನಾಗಾರಾಧನೆ ನಡೆಯುತ್ತಿದೆ.
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಖಾದರ್ ಅವರಿಗೆ ಸೇರಿದ ಪಿತ್ರಾರ್ಜಿತ ಆಸ್ತಿ ಇದೆ. ಈ ಜಾಗವನ್ನು ಅವರ ತಂದೆಯ ತಂಗಿ ಮಗ ಅಬ್ದುಲ್ ರಹ್ಮಾನ್ ನೋಡಿಕೊಳ್ಳುತ್ತಿದ್ದಾರೆ. ಖಾದರ್ ಅವರಿಗೆ ಸೇರಿದ ಜಾಗದಲ್ಲಿ ಒಂದೆಡೆ ಹಳೆಯ ನಾಗಬನ ಇತ್ತು. ಆದರೆ, ಅದಕ್ಕೆ ಯಾವುದೇ ಪೂಜೆ ನಡೆಯುತ್ತಿರಲಿಲ್ಲ. ಈ ಜಾಗವನ್ನು ಹಾಗೇ ಬಿಡಲಾಗಿತ್ತು. ಆದರೆ ಕುಟುಂಬವೊಂದಕ್ಕೆ ದೋಷ ಕಂಡುಬಂದ ಹಿನ್ನೆಲೆ ಅಷ್ಟಮಂಗಲವಿಟ್ಟು ನೋಡಿದಾಗ ಆ ಕುಟುಂಬಕ್ಕೆ ಸೇರಿದ ನಾಗಬನ ಪುಣಚದಲ್ಲಿರುವುದು ಹೋಗಿ ಪರಿಶೀಲಿಸಿದಾಗ ಬನದ ಜಾಗ ಖಾದರ್ ಅವರಿಗೆ ಸೇರಿತ್ತು.
ಹೀಗಾಗಿ ಆ ದೊಡ್ಡ ಮನೆ ಕುಟುಂಬದ ಹಿರಿಯರಾದ ಮಾಜಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿರಾಜ್ ಅವರು ಈ ಜಾಗ ನೋಡಿಕೊಳ್ಳುತ್ತಿರುವ ಅಬ್ದುಲ್ ಅವರಲ್ಲಿ ವಿಚಾರ ತಿಳಿಸಿದಾಗ, ಅವರು ಖಾದರ್ ಅವರನ್ನು ಭೇಟಿ ಮಾಡಿಸಿದ್ದಲ್ಲದೇ ಎಲ್ಲ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಸೂಕ್ಷ್ಮತೆ ಅರಿತ ಖಾದರ್ ಕೂಡಲೇ ನಾಗಬನಕ್ಕೆ ಬೇಕಾದ ಜಾಗವನ್ನು ಆ ಕುಟುಂಬಕ್ಕೆ ಉಚಿತವಾಗಿ ನೀಡಿದ್ದರು.
